ನಿರ್ದೇಶಕ ಎ.ಪಿ. ಅರ್ಜುನ್ ಮತ್ತು ನಟ ಧ್ರುವ ಸರ್ಜಾ ಕಾಂಬಿನೇಷನ್ನಲ್ಲಿ ಮೂಡಿಬಂದ ಮಾರ್ಟಿನ್ ಸಿನಿಮಾ 2ನೇ ವಾರದತ್ತ ಮುನ್ನುಗ್ಗುತ್ತಿದೆ. ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾದ ಮಾರ್ಟಿನ್ ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ತೆರೆಕಂಡಿದೆ. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈಗಾಗಲೇ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ ಖುಷಿಪಟ್ಟಿದೆ.
ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಚಿತ್ರಕ್ಕೆ ಉದಯ್ ಕೆ ಮೆಹ್ತಾ ಬಂಡವಾಳ ಹೂಡಿದ್ದಾರೆ. ಆ್ಯಕ್ಷನ್ ಪ್ರಿನ್ಸ್ಗೆ ವೈಭವಿ ಶಾಂಡಿಲ್ಯ ಜೋಡಿಯಾಗಿ ನಟಿಸಿದ್ದಾರೆ. ಧ್ರುವ ಸರ್ಜಾ ದ್ವಿಪಾತ್ರದಲ್ಲಿ ಅಬ್ಬರಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಮಾರ್ಟಿನ್ ಸಿನಿಮಾ ನೆಗೆಟಿವ್ ರಿವ್ಯೂ, ಕಾಮೆಂಟ್ಸ್ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ. ಬೇರೆ ಸ್ಟಾರ್ ನಟನ ಅಭಿಮಾನಿಗಳು ಬೇಕಂತಲೇ ನೆಗೆಟಿವ್ ರಿವ್ಯೂ ಮಾಡಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬರ್ತಿದೆ. ಇನ್ನು ಕೆಲ ರಿವ್ಯೂ ವೀಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ನೆಗೆಟಿವ್ ರಿವ್ಯೂ ಮಾಡಿದವರಿಗೆ ಧ್ರುವ ಸರ್ಜಾ ಅಂಧಾಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ ಅನ್ನೊ ಚರ್ಚೆ ಕೂಡ ನಡೀತಿದೆ.
ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮೂಲಕ ಪರಿಚಿತನಾಗಿರುವ ಸುಧಾಕರ್ ಗೌಡ ಎನ್ನುವವರು ಮಾರ್ಟಿನ್ ಸಿನಿಮಾ ನೋಡಿದ ಬಳಿಕ ಸಿನಿಮಾ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸ್ನೇಹಿತರ ಜೊತೆ ಸಿನಿಮಾ ನೋಡಿ ಬಂದು ತಮ್ಮ ಅಭಿಪ್ರಾಯವನ್ನು ವೀಡಿಯೋ ಮಾಡಿ ಹಂಚಿಕೊಂಡಿದ್ದರು. ಅವರು ಮಾತನಾಡಿದ್ದ ಕೆಲ ವಿಚಾರಗಳ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಬಳಿಕ ಈ ಬಗ್ಗೆ ಸುಧಾಕರ್ ಗೌಡ ಕ್ಷಮೆ ಕೋರಿ ವೀಡಿಯೋ ಮಾಡಿದ್ದರು. ಸಿನಿಮಾ ನೋಡಿ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಆದರೂ ನನ್ನ ಕೆಲ ಮಾತುಗಳಿಂದ ಯಾರಿಗಾದರೂ ನೋವು ಮಾಡಿದ್ದರೆ ಕ್ಷಮಿಸಿ ಎಂದಿದ್ದರು.
ಇದೀಗ ತಮ್ಮ ಸಾಕಷ್ಟು ಬೆದರಿಕೆ ಬರ್ತಿದೆ. ಸುಧಾಕರ್ ಗೌಡ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸ್ವತಃ ಸುಧಾಕರ್ ಗೌಡ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ದುಡ್ಡು ಕೊಟ್ಟು ಸಿನಿಮಾ ನೋಡಿದ್ದೇನೆ, ಚನಾಗಿಲ್ಲ ಎಂದರೆ ಚೆನ್ನಾಗಿಲ್ಲ ಎಂದು ಹೇಳುವ ಅಧಿಕಾರ ನನಗೆ, ಅಷ್ಟಕ್ಕೆ ನನಗೆ 500 ಕ್ಕೂ ಹೆಚ್ಚು ಕರೆಗಳು ಬಂದಿದ್ದು ಬೆದರಿಕೆ ಹಾಕುತ್ತಿದ್ದಾರೆ. ಯಾರು ಹೀಗೆ ಬೆದರಿಕೆ ಎದುರಿಸುತ್ತಿದ್ದಾರೋ ಅವರೆಲ್ಲಾ ಬನ್ನಿ, ಈ ಬಗ್ಗೆ ಗಟ್ಟಿಯಾಗಿ ನಿಲ್ಲೋಣ ಎಂದು ಹೇಳಿ ಸುಧಾಕರ್ ಗೌಡ ಮತ್ತೊಂದು ವೀಡಿಯೋ ಹಂಚಿಕೊಂಡಿದ್ದಾರೆ. ಈ ರೀತಿ ದೌರ್ಜನ್ಯ ಎಸಗುವವರ ವಿರುದ್ಧ ಹೋರಾಟ ಮಾಡೋಣ ಎಂದಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ : ದರ್ಶನ್ ಫ್ಯಾನ್ಸ್ ಹುಚ್ಚಾಟಕ್ಕೆ ಶ್ರವಣ ಶಕ್ತಿಯನ್ನೇ ಕಳ್ಕೊಂಡ ಹಿರಿಯ ಸಾಹಿತಿ ಗೊರೂರು ಚೆನ್ನಬಸಪ್ಪ..!