ಗದಗ : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ಗೆ ಮತ್ತೆ ಜೈಲೇ ಗತಿಯಾಗಿದೆ. 57ನೇ ಸಿಟಿ ಸಿವಿಲ್ ಕೋರ್ಟ್ ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಿದ್ದು, ಬೇಲ್ ನೀರೀಕ್ಷೆಯಲ್ಲಿದ್ದ ದರ್ಶನ್ಗೆ ಶಾಕ್ ಎದುರಾಗಿದೆ. ಹೀಗಾಗಿ ಹೈಕೋರ್ಟ್ ಮೊರೆ ಹೋಗಲು ದರ್ಶನ್ ಮುಂದಾಗಿದ್ದು, ಇಂದು ಅಥವಾ ನಾಳೆ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಇದರ ನಡುವೆಯೇ ಹಿರಿಯ ಸಾಹಿತಿ ನಾಡೋಜ ಡಾ.ಗೊರೂರು ಚೆನ್ನಬಸಪ್ಪ ಗಂಭೀರ ಆರೋಪವನ್ನು ಮಾಡಿದ್ದು, ನಟ ದರ್ಶನ್ ಅಭಿಮಾನಿಗಳಿಂದ ಶ್ರವಣ ಶಕ್ತಿಯನ್ನೇ ಕಳೆದುಕೊಂಡೆ ಎಂದು ಹೇಳಿದ್ದಾರೆ. ಗದಗನ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಸ್ವಾಮಿಜಿ ಪುಣ್ಯಸ್ಮರಣೆ ಕಾರ್ಯಕ್ರದಲ್ಲಿ ನಾಡೋಜ ಡಾ.ಗೊರೂರು ಚೆನ್ನಬಸಪ್ಪ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ನಾಡೋಜ ಡಾ.ಗೊರೂರು ಚೆನ್ನಬಸಪ್ಪ ಅವರು, ತಮಗಾದ ಭೀಕರ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಗೊರೂರು ಚೆನ್ನಬಸಪ್ಪ ಹೇಳಿದ್ದೇನು? ಇಂದು ಪ್ರತಿನಿತ್ಯ ಮಾಧ್ಯಮಗಳಲ್ಲಿ ಪ್ರಚಲಿತದಲ್ಲಿರುವ ಪುಣ್ಯಾತ್ಮ ದರ್ಶನ್ ಜನ್ಮದಿನ ಸಂದರ್ಭದ ವೇಳೆ ಬೆಂಗಳೂರಿನ ನನ್ನ ನಿವಾಸದ ಪಕ್ಕ ದರ್ಶನ್ ಅಭಿಮಾನಿಗಳು ಜಮಾಯಿಸಿದ್ದರು. ನಟ ದರ್ಶನ್ ಜನ್ಮದಿನ ಹಿನ್ನೆಲೆ ಭಾರೀ ಪ್ರಮಾಣದಲ್ಲಿ ಸಿಡಿಮದ್ದು ಹಾರಿಸಿದ್ದರು. ಆದರೆ ಭಾರೀ ಸಿಡಿಮದ್ದಿನಿಂದ ನಾನು ನನ್ನ ಶ್ರವಣ ಶಕ್ತಿ ಕಳೆದುಕೊಳ್ಳಬೇಕಾಯಿತು ಎಂದು ನಾಡೋಜ ಡಾ.ಗೊರೂರು ಚೆನ್ನಬಸಪ್ಪ ಬೇಸರ ಹೊರ ಹಾಕಿದ್ದಾರೆ.