ಮೈಸೂರು : ಮುಡಾ ಹಗರಣ ಸಂಬಂಧ ಕೋರ್ಟ್ ಆದೇಶದಂತೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ಅವರು, ತನಿಖೆಗಾಗಿ ನಾಲ್ಕು ತಂಡಗಳನ್ನು ರಚನೆ ಮಾಡಿದ್ದಾರೆ.
ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೆ ಕಚೇರಿಯಲ್ಲಿ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಎಸ್‌ಪಿ ಉದೇಶ್, ಇಬ್ಬರು ಡಿವೈಎಸ್ಪಿ ಮತ್ತು ಇಬ್ಬರು ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ನಾಲ್ಕು ತಂಡ ರಚನೆ ಮಾಡಿ, ತನಿಖೆಯ ಜವಾಬ್ದಾರಿಯನ್ನು ವಹಿಸಿದ್ದಾರೆ.
ಮೈಸೂರು DySP ಮಾಲತೇಶ್ ನೇತೃತ್ವದಲ್ಲಿ ಒಂದು ತಂಡ, ಚಾಮರಾಜನಗರ DySP ಮ್ಯಾಥ್ಯೂ ಥಾಮಸ್ ನೇತೃತ್ವದಲ್ಲಿ ಎರಡನೇ ತಂಡ, ಮೈಸೂರಿನ ಇನ್ಸ್‌ಪೆಕ್ಟರ್ ರವಿಕುಮಾರ್ ನೇತೃತ್ವದ 3ನೇ ತಂಡ, ಕೊಡಗು ಇನ್ಸ್‌ಪೆಕ್ಟರ್ ಲೋಕೇಶ್ ಕುಮಾರ್ ನೇತೃತ್ವದ 4ನೇ ತನಿಖಾ ತಂಡ ರಚನೆ ಮಾಡಲಾಗಿದೆ.
ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆಗೆ ಶನಿವಾರ ತುರ್ತು ಸಭೆ ನಡೆಸಿದ ಎಸ್‌ಪಿ ಉದೇಶ್ ಅವರು, ಪ್ರಕರಣ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕೋರ್ಟ್ ನಿಂದ ನೀಡಿರುವ ದಾಖಲೆಗಳು ಹಾಗೂ ದೂರಿನಲ್ಲಿ ಅಡಕವಾಗಿರುವ ಮಾಹಿತಿಗಳ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ ಮುಂದಿನ ಒಂದೆರಡು ದಿನಗಳ ಕಾಲ ಸಂಪೂರ್ಣ ಪರಿಶೀಲನೆ ನಡೆಸಲಿದೆ. ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹ, ಆರೋಪಿಗಳ ಹೇಳಿಕೆ ದಾಖಲಿಸಲು ಹಾಗೂ ಇನ್ನಿತರ ಪ್ರಕ್ರಿಯೆ ನಡೆಸಲು 4 ಟೀಂಗಳ ರಚನೆ ಮಾಡಲಾಗಿದ್ದು, ಪ್ರಾಥಮಿಕ ಪರಿಶೀಲನೆ ಮುಗಿಯುತ್ತಿದ್ದಂತೆ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಮುಡಾ ಫೈಟ್ ಹೊತ್ತಲ್ಲೇ ಮತ್ತೆ ಸಿಎಂ ಕನಸು ಬಿಚ್ಚಿಟ್ಟ ಡಿಸಿಎಂ ಡಿಕೆಶಿ – ಹೇಳಿದ್ದೇನು?