ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಮೊದಲ ಹಂತದಲ್ಲಿ ಏಪ್ರಿಲ್ 26 ರಂದು 14 ಕ್ಷೇತ್ರಗಳಿಗೆ, ಎರಡನೇ ಹಂತದಲ್ಲಿ ಮೇ 07 ರಂದು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಜೂನ್ 04ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿಯ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ನಿಟ್ಟಿನಲ್ಲಿ ಬಿಜೆಪಿ – ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಭರ್ಜರಿ ತಂತ್ರಗಾರಿಕೆ ರೂಪಿಸುತ್ತಿದೆ.
ಇದೀಗ ಇದರ ನಡುವೆ ಲೋಕ್ ಪೋಲ್ ಸಮೀಕ್ಷೆ ಬಿಡುಗಡೆಯಾಗಿದ್ದು, 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಸಮೀಕ್ಷೆಯ ಫಲಿತಾಂಶದಿಂದ ಶಾಕ್ ಆದರೆ ಆಡಳಿತಾರೂಢ ಕಾಂಗ್ರೆಸ್ ನಾಯಕರಲ್ಲಿ ಆತ್ಮವಿಶ್ವಾಸ ಚಿಗುರೊಡೆದಿದೆ.
ಹಲವು ಸಮೀಕ್ಷೆಗಳು ಒಂದೊಂದು ಪಕ್ಷದ ಪರವಾಗಿ ಬಂದಿವೆ. ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆಯಲ್ಲಿ ನಿಖರ ಅಂಕಿ ಅಂಶ ನೀಡಿದ್ದ ಲೋಕ್ ಪೋಲ್, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವ ಪಕ್ಷಗಳು ಎಷ್ಟು ಸ್ಥಾನಗಳನ್ನು ಗೆಲ್ಲುತ್ತವೆ ಎನ್ನುವ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಕಳೆದ ಬಾರಿಗಿಂತ ಸುಮಾರು 10ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಲೋಕ್ ಪೋಲ್ ಸಮೀಕ್ಷೆ ತಿಳಿಸಿದ್ದು, ಕಾಂಗ್ರೆಸ್ ಹತ್ತಿರತ್ತಿರ 20 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಸೂಚಿಸಿದೆ. ಲೋಕ್ ಪೋಲ್ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 15-17 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದು, ಬಿಜೆಪಿ 11-13 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ. ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಸ್ಥಾನಗಳಿವೆ.
ಕಾಂಗ್ರೆಸ್ 15-17 ಸ್ಥಾನಗಳನ್ನು ಗೆಲ್ಲುವುದಾಗಿ ಲೋಕ್ ಪೋಲ್ ಸಮೀಕ್ಷೆ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಇದು ಬಿಜೆಪಿಗೆ ದೊಡ್ಡ ಆಘಾತವಾಗಿದ್ದು, ಮೋದಿ ಹೆಸರಿನಲ್ಲಿ ಮತ್ತೊಮ್ಮೆ ಸುಲಭ ಗೆಲುವಿನ ಕನಸು ಕಾಣುತ್ತಿರುವ ಹಲವು ಅಭ್ಯರ್ಥಿಗಳಿಗೆ ಸಮೀಕ್ಷೆ ಬಿಗ್ ಶಾಕ್ ನೀಡಿದೆ.
ಈ ಸಮೀಕ್ಷೆ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಸಂತೋಷ ನೀಡದೇ ಇದ್ದರೂ, ಒಂದು ಹಂತಕ್ಕೆ ಸಮಾಧಾನ ತಂದಿದೆ. ಸಿಎಂ ಸಿದ್ದರಾಮಯ್ಯ ಕೂಡ ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ಕನ್ನಡಕ್ಕೆ “ಕೋಟಿ” ತಂದ ಜಿಯೋ ಸ್ಟುಡಿಯೋಸ್ – ಧನಂಜಯ್ ಅವರ ಹೊಸ ಸಿನಿಮಾ ಜೂನ್ 14ಕ್ಕೆ ರಿಲೀಸ್..!