ಬೆಂಗಳೂರು : ಹಿಟ್ & ರನ್ ಪ್ರಕರಣಗಳಿಗೆ ಹೊಸದಾಗಿ ಜಾರಿಗೆ ತಂದಿರುವ ಕಾನೂನನ್ನು ವಿರೋಧಿಸಿ ಕರ್ನಾಟಕದಲ್ಲಿ ಲಾರಿ ಮಾಲೀಕರ ಸಂಘ ಜನವರಿ 17 ಮಧ್ಯರಾತ್ರಿ 11ಗಂಟೆಯಿಂದಲೇ ಲಾರಿ ಮುಷ್ಕರ ಆರಂಭಿಸಿದೆ.
ರಾಜ್ಯದಲ್ಲಿ 9 ಲಕ್ಷಕ್ಕೂ ಹೆಚ್ಚು ಲಾರಿಗಳಿದ್ದು, ಈ ಪೈಕಿ ಶೇ.90ರಷ್ಟು ಲಾರಿಗಳು ಮುಷ್ಕರದಲ್ಲಿ ಭಾಗವಹಿಸುತ್ತಿವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುವವರೆಗೂ ಲಾರಿಗಳನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘ ತಿಳಿಸಿದೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ನಿನ್ನೆಯಿಂದಲೇ ಲಾರಿ ಮುಷ್ಕರ ಆರಂಭವಾಗಿದ್ದು, ಲಾರಿ ಮಾಲೀಕರು ಹಾಗೂ ಚಾಲಕರು ಲಾರಿಗಳನ್ನು ನಿಲ್ಲಿಸಿ ಮುಷ್ಕರಕ್ಕೆ ಬೆಂಬಲ ನೀಡುತ್ತಿದ್ದಾರೆ.
ಹಿಟ್ & ರನ್ ಹೊಸ ಕಾನೂನಿನಲ್ಲಿ ಏನಿದೆ? ಹಿಟ್ & ರನ್ ಪ್ರಕರಣಕ್ಕೆ ಸಂಬಂಧಿಸಿದ ನೂತನ ಕಾನೂನಿನಲ್ಲಿ ಲಾರಿ ಚಾಲಕರಿಗೆ 10 ವರ್ಷ ಶಿಕ್ಷೆ ಹಾಗೂ 7 ಲಕ್ಷ ದಂಡ ವಿಧಿಸುವ ಅಂಶವಿದೆ. ಹೀಗಾಗಿ ಈ ಕಾನೂನು ವಾಪಸ್ ಪಡೆಯುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘ ಲಾರಿಗಳನ್ನು ನಿಲ್ಲಿಸಿ ಮುಷ್ಕರಕ್ಕೆ ಕರೆ ನೀಡಿದೆ.
ಲಾರಿ ಮುಷ್ಕರ ಪ್ರಮುಖ ಬೇಡಿಕೆಗಳು :
- ಕೇಂದ್ರ ಸರ್ಕಾರದ ಭಾರತೀಯ ನ್ಯಾಯ ಸಂಹಿತೆ ಕಲಂ ೧೦೬ರ ಉಪವಿಧಿ ೧ ಮತ್ತು ೨ನ್ನು ಕೈ ಬಿಡಬೇಕು.
- ರಾಜ್ಯದ ಗಡಿ ಭಾಗಗಳಲ್ಲಿರುವ ಎಲ್ಲ ಸಾರಿಗೆ ಇಲಾಖೆ ತಪಾಸಣೆ ಠಾಣೆಗಳನ್ನು ತೆಗೆದು ಹಾಕುವುದು.
- ಎಕ್ಸ್‌ಎಕ್ಸ್ ಪ್ರೊಡೆಕ್ಷನ್ ವಿಧಿಸುತ್ತಿರುವ ೨೦ ಸಾವಿರ ದಂಡವನ್ನು ಕಡಿಮೆಗೊಳಿಸಬೇಕು.
- ಕಪ್ಪು ಪಟ್ಟಿ ಹೆಸರಿನಲ್ಲಿ ವಾಣಿಜ್ಯ ವಾಹನಗಳಿಗೆ ಎಫ್‌ಸಿ ಮತ್ತು ಪರ್ಮಿಟ್ ನವೀಕರಣ ಮಾಡಿಕೊಡಲು ನಿರಾಕರಿಸುವುದನ್ನು ನಿಲ್ಲಿಸಬೇಕು.
- ಡಿಎಸ್‌ಎ ಕೇಸುಗಳು ಎಲ್ಲೆ ಇದ್ದರೂ ಅದನ್ನು ವಾಹನ ಮಾಲೀಕರು ತಮ್ಮ ಮೂಲ ಕಚೇರಿಯಲ್ಲೇ ಮುಗಿಸಿಕೊಳ್ಳುವ ಅವಕಾಶ ನೀಡಬೇಕು.
- ನಗರದಲ್ಲಿ ಸರಕು ಸಾಗಾಣೆ ವಾಹನಗಳ ನಗರ ಪ್ರವೇಶಕ್ಕೆ ದಿನದ ಕೆಲವು ಸಮಯದಲ್ಲಿ ಮಾಡಿರುವ ನಿರ್ಬಂಧವನ್ನು ಕೈಬಿಡಬೇಕು.
- ಅಪಘಾತ ನಡೆದಾಗ ವಾಹನ ಚಾಲನಾ ಪತ್ರವನ್ನು ವಶಪಡಿಸಿಕೊಳ್ಳುವುದನ್ನು ಬಿಡಬೇಕು, ಅಪಘಾತ ನಡೆದ ನಂತರ ವಶಪಡಿಸಿಕೊಂಡ ವಾಹನ ಮತ್ತು ಚಾಲಕನನ್ನು ತ್ವರಿತವಾಗಿ ಬಿಡಬೇಕು.
- ಹೊರ ರಾಜ್ಯಗಳ ವಾಹನಗಳು ರಾಜ್ಯದಲ್ಲಿ ಅಪಘಾತಕ್ಕೀಡಾದಾಗ ವಾಹನ ಮತ್ತು ಚಾಲಕನ ಬಿಡುಗಡೆಗೆ ಸ್ಥಳೀಯ ಭದ್ರತೆ ಜಾಮೀನು ಕೇಳುವುದನ್ನು ನಿಲ್ಲಿಸಬೇಕು.
ಇದನ್ನೂ ಓದಿ : ಬೆಂಗಳೂರು : ಹೋಟೆಲ್ವೊಂದರಲ್ಲಿ ಯುವತಿಯನ್ನು ಟಚ್ ಮಾಡಿ ಕಾಮುಕರ ವಿಕೃತಿ..!