ಹೆಚ್.ಎಂ ರಾಮಚಂದ್ರ (ಹೂಡಿ ಚಿನ್ನಿ) ಅವರು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಜನಪ್ರಿಯರಾಗಿದ್ದಾರೆ. ಜೊತೆಗೆ ಭಾರತೀಯರ ಸೇವಾ ಸಮಿತಿ ಸ್ಥಾಪಕರೂ ಆಗಿರುವ ಹೂಡಿ ಚಿನ್ನಿ ಅವರು ಈಗ ಗಾಯಕರಾಗಿದ್ದಾರೆ. ಮಂಜುಕವಿ ಅವರು ಬರೆದು ಸಂಗೀತ ನೀಡಿರುವ ಸಾಮಾಜಿಕ ಸಂದೇಶ ಸಾರುವ “ಕೋಟಿ ಕೋಟಿ ರೊಕ್ಕ ಗಳಿಸಿ” ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಈ ಹಾಡು ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು.
ಶ್ರೀಮಹದೇವ ಸ್ವಾಮಿಜಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ಚೇತನ್ ಅಹಿಂಸ, ನಿರ್ದೇಶಕ ಋಷಿ, ಭಾರತೀಯ ಸೇವಾ ಸಮಿತಿ ರಾಜ್ಯಾಧ್ಯಕ್ಷ ಅಮರ್ ಸೇರಿದಂತೆ ಅನೇಕ ಗಣ್ಯರು ಹಾಡು ಬಿಡುಗಡೆ ಮಾಡಿ ಹೂಡಿ ಚಿನ್ನಿ ಅವರ ಗಾಯನ ಹಾಗೂ ಅವರ ಜನಪರ ಕಾರ್ಯವನ್ನು ಕೊಂಡಾಡಿದರು.
ಈ ಹಾಡಿನಲ್ಲಿರುವ ಸಾಹಿತ್ಯಕ್ಕೂ ಹೂಡಿ ಚಿನ್ನಿ ಅವರ ಗುಣಕ್ಕೂ ಹೊಂದಾಣಿಕೆ ಆಗುತ್ತದೆ. ಹಾಗಾಗಿ ಈ ಹಾಡನ್ನು ಅವರಿಂದಲೇ ಹಾಡಿಸಬೇಕೆನಿಸಿತು. ಅವರು ಮೊದಲು ಒಪ್ಪಲಿಲ್ಲ. ಆನಂತರ ಅಭ್ಯಾಸ ಮಾಡಿ ಹಾಡಿದ್ದಾರೆ. ಎಂ.ಕೆ.ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಕೇಳಿ ಆನಂದಿಸಿ ಎಂದು ಮಂಜುಕವಿ ಹೇಳಿದರು.
ಹಾಡು ಬಿಡುಗಡೆ ಸಮಾರಂಭಕ್ಕೆ ಬಂದು ಹಾರೈಸಿದ ಎಲ್ಲಾ ಗಣ್ಯರಿಗೂ ಶರಣು ಎಂದ ಹೂಡಿ ಚಿನ್ನಿ ಅವರು, ಮಂಜುಕವಿ ಅವರು ಬರೆದಿರುವ ಈ ಹಾಡು ಎಲ್ಲರ ಮನ ಮುಟ್ಟವಂತಿದೆ. ಈ ಗೀತೆಯನ್ನು ನೀವೇ ಹಾಡಿ ಅಂದಾಗ ನಾನು ಬೇಡ. ಬೇರೆ ಜನಪ್ರಿಯ ಗಾಯಕರು ಹಾಡಲಿ ಎಂದೆ. ಆದರೆ ಸ್ನೇಹಿತರ ಒತ್ತಾಯಕ್ಕೆ ಮಣಿದು ಅಭ್ಯಾಸ ಮಾಡಿ ಹಾಡಿದ್ದೇನೆ. ಹಾಡಿನಲ್ಲಿ ಒಳ್ಳೆಯ ಸಂದೇಶವಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.
ಇದನ್ನೂ ಓದಿ : ಪುನೀತ್ ಕೆರೆಹಳ್ಳಿ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ ಪ್ರಕರಣದ ಬಗ್ಗೆ ಭೈರಪ್ಪ ಹರೀಶ್ ಕುಮಾರ್ ಆಕ್ರೋಶ..!