ಶ್ರೀನಗರ : ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 10 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದಿದೆ.
ಭಕ್ತರಿದ್ದ ಬಸ್ ವೈಷ್ಣೋದೇವಿ ಕ್ಷೇತ್ರ ಕಟ್ರಾಗೆ ತೆರಳುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದಾರೆ. ನಿನ್ನೆ ಸಂಜೆ 6.10ರ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳಲು ಹೋದ ಬಸ್, ಭಾರೀ ಕಂದಕಕ್ಕೆ ಬಿದ್ದದೆ. ಪರಿಣಾಮ ಅತೀ ಹೆಚ್ಚು ಸಾವು ಸಂಭವಿಸಿದೆ.
ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ಪೊಲೀಸರು ರಾತ್ರಿ 8:10ರ ವೇಳೆಗೆ ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದಾರೆ. ಘಟನೆಯಲ್ಲಿ ಹತ್ತು ಸಾವುಗಳು ದೃಢಪಟ್ಟಿವೆ. 30ಕ್ಕೂ ಹೆಚ್ಚು ಗಾಯಾಳುಗಳನ್ನು ರಿಯಾಸಿ, ತ್ರೇಯತ್ ಮತ್ತು ಜಮ್ಮುವಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘಟನೆಯ ಸಂಬಂಧ ಕಳೆದ ರಾತ್ರಿಯೇ ಪ್ರಧಾನಿ ಮೋದಿ ಮಾಹಿತಿ ಪಡೆದಿದ್ದು, ದಾಳಿಕೋರರನ್ನು ಪತ್ತೆ ಹಚ್ಚಿ ತಕ್ಕ ಪಾಠ ಕಲಿಸಲು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಉಗ್ರರನ್ನು ಪತ್ತೆ ಹಚ್ಚುವ ಸಲುವಾಗಿ ಪೊಲೀಸ್, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರೆ ನಾಯಕರು ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಸೇನಾಧಿಕಾರಿಗಳು ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ.
ಇದನ್ನೂ ಓದಿ : ಟಿ20 ವಿಶ್ವಕಪ್ : ಬುಮ್ರಾ, ಪಾಂಡ್ಯ ಬೌಲಿಂಗ್ ದಾಳಿಗೆ ಮಂಡಿಯೂರಿದ ಪಾಕ್ – ಭಾರತಕ್ಕೆ 6 ರನ್ಗಳ ರೋಚಕ ಜಯ..!