ದೆಹಲಿ : ಕರ್ನಾಟಕ ಹೈಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ ಎನ್ ವಿ ಅಂಜಾರಿಯಾ ಅವರನ್ನು ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ನ್ಯಾ. ಎನ್ ವಿ ಅಂಜಾರಿಯಾ ಸದ್ಯ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದಾರೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ, ನ್ಯಾ. ಅಂಜಾರಿಯಾ ಕರ್ನಾಟಕ ಹೈಕೋರ್ಟ್ ಸಿಜೆಯಾಗಲಿದ್ದಾರೆ. ಈ ನೇಮಕಾತಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಪಿಎಸ್ ದಿನೇಶ್ ಕುಮಾರ್ ನಿವೃತ್ತಿಯ ನಂತರ ಜಾರಿಗೆ ಬರಲಿದೆ. ಜಸ್ಟಿಸ್ ದಿನೇಶ್ ಕುಮಾರ್ ಫೆಬ್ರವರಿ 24 ರಂದು ನಿವೃತ್ತರಾಗಲಿದ್ದಾರೆ.
ಜಸ್ಟಿಸ್ ಅಂಜಾರಿಯಾ ಅವರು 21 ನವೆಂಬರ್ 2011 ರಂದು ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಇದಕ್ಕೂ ಮುನ್ನ ಅವರು ಗುಜರಾತ್ ಹೈಕೋರ್ಟ್‌ನಲ್ಲಿ ಸಿವಿಲ್, ಸಾಂವಿಧಾನಿಕ, ಕಂಪನಿ ಕಾನೂನು, ಕಾರ್ಮಿಕ ಮತ್ತು ಸೇವಾ ವಿಷಯಗಳಲ್ಲಿ ಕರ್ತವ್ಯ ನಿಭಾಯಿಸಿದ್ದರು. ನಾಗರಿಕ ಮತ್ತು ಸಾಂವಿಧಾನಿಕ ಪ್ರಕರಣಗಳಲ್ಲಿ ಹೆಚ್ಚಿನ ಪರಿಣತಿ ಹೊಂದಿದ್ದಾರೆ.
ನ್ಯಾ. ಅಂಜಾರಿಯಾ ಕಾನೂನಿನ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರುವ ಸಮರ್ಥ ನ್ಯಾಯಾಧೀಶರು ಮತ್ತು ನಿಷ್ಪಕ್ಷಪಾತ ಸಮಗ್ರತೆಯನ್ನು ಹೊಂದಿದ್ದಾರೆ. ನ್ಯಾಯಾಧೀಶರಾಗಿ ಅವರ ನಡವಳಿಕೆಯಲ್ಲಿ ಉನ್ನತ ಗುಣಮಟ್ಟ ಕಾಯ್ದುಕೊಂಡಿದ್ದಾರೆ ಎಂದು ಕೊಲಿಜಿಯಂ ಶಿಫಾರಸ್ಸಿನಲ್ಲಿ ಉಲ್ಲೇಖಿಸಿದೆ. ಎಲ್ಲಾ ಸಂಬಂಧಿತ ಅಂಶಗಳನ್ನು ಪರಿಗಣಿಸಿ, ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು ಎಲ್ಲಾ ರೀತಿಯಲ್ಲೂ ಅರ್ಹರು ಮತ್ತು ಸೂಕ್ತರು ಎಂದು ಕೊಲಿಜಿಯಂ ಪರಿಗಣಿಸಿದೆ.
ಕೊಲಿಜಿಯಂ ಶಿಫಾರಸ್ಸಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ಬಾಕಿ ಇದೆ. ಒಪ್ಪಿಗೆ ದೊರೆತರೆ ಫೆಬ್ರವರಿ 25ರಂದು ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ ನ್ಯಾ. ಅಂಜಾರಿಯಾ ಅಧಿಕಾರ ಸ್ವೀಕರಿಸಲಿದ್ದಾರೆ.
– ಬಿಟಿವಿ ನ್ಯೂಸ್ ಡೆಸ್ಕ್
ಇದನ್ನೂ ಓದಿ : ‘ಕಾಂಗ್ರೆಸ್ ಲೋಕಸಭಾ ಎಲೆಕ್ಷನ್ನಲ್ಲಿ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ’ – ಪ್ರಧಾನಿ ಮೋದಿ ವ್ಯಂಗ್ಯ..!