ಬೆಂಗಳೂರು : ಬಿಜೆಪಿ ಜೊತೆ ಸೀಟು ಹಂಚಿಕೆ ಹಗ್ಗಜಗ್ಗಾಟದಲ್ಲಿ ಜೆಡಿಎಸ್ ಜಯಶಾಲಿಯಾಗಿದ್ದು, ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳು ತೆನೆಹೊತ್ತ ಮಹಿಳೆಗೆ ಅಂತ ಬಿಜೆಪಿ ವರಿಷ್ಠರೇ ಘೋಷಿಸಿದ್ದಾರೆ. ಹೃದಯದ ಶಸ್ತ್ರಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ನಿನ್ನೆ ಡಿಸ್ಚಾರ್ಜ್ ಆಗಿ ವಿಶೇಷ ವಿಮಾನದ ಮೂಲಕ ಚೆನ್ನೈನಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇದೀಗ ಗುಣಮುಖರಾಗಿರುವ ಹೆಚ್‌ಡಿಕೆ ಅವರು ಇಂದು ಮಧ್ಯಾಹ್ನ ಜೆಡಿಎಸ್ ನ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಲಿದ್ದಾರೆ.
ಬಿಜೆಪಿಗೆ 25 ಕ್ಷೇತ್ರಗಳು ಮತ್ತು ಜೆಡಿಎಸ್ 3 ಕ್ಷೇತ್ರಗಳಲ್ಲಿ ಒಟ್ಟಿಗೆ ಸ್ಪರ್ಧೆ ಮಾಡೋದು ಅಂತಾ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್ವಾಲ್ ಅವರೇ ಘೋಷಣೆ ಮಾಡಿದ್ದಾರೆ. ಈ ಹಿನ್ನಲೆ ಇಂದು ಮಧ್ಯಾಹ್ನ ಜೆ.ಪಿ.ನಗರ ನಿವಾಸದಲ್ಲಿ ಮೆಗಾ ಮೀಟಿಂಗ್ ನಡೆಯಲಿದೆ. ಸಭೆ ನಡೆದ ಬಳಿಕ ಹೆಚ್‌ಡಿಕೆ ಜೆಡಿಎಸ್‌ಗೆ ಸಿಕ್ಕಿರುವ 3 ಕ್ಷೇತ್ರಗಳು ಅಂದರೆ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳಿಗೆ ಇಂದೇ ಟಿಕೆಟ್ ಘೋಷಣೆ ಮಾಡಲಿದ್ದಾರೆ.
ಈಗಾಗಲೇ ಮಂಡ್ಯ ನಾಯಕರಿಂದ ಹೆಚ್‌ಡಿಕೆ ಅಥವಾ ನಿಖಿಲ್ ಸ್ಪರ್ಧಿಸುವಂತೆ ಆಗ್ರಹ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಒಂದು ಮಂಡ್ಯ ಲೋಕಸಭಾ ಕ್ಷೇತ್ರ ಇಲ್ಲಿ ಹೆಚ್ಚೂಕಮ್ಮಿ ಕುಮಾರಸ್ವಾಮಿಯವರೇ ಅಭ್ಯರ್ಥಿ ಆಗೋದು ಫಿಕ್ಸ್ ಆಗಿದೆ.
ಉಳಿದ ಕ್ಷೇತ್ರಗಳಾದ ಕೋಲಾರದಿಂದ ಮಲ್ಲೇಶ್ ಬಾಬು ಅವರನ್ನು ಕಣಕ್ಕಿಳಿಸಲು ಸಿದ್ದತೆ ನಡೆಯುತ್ತಿದೆ. ಇದರೊಂದಿಗೆ ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಹೆಸರನ್ನು ಹೆಚ್‌ಡಿಕೆ ಘೋಷಣೆ ಮಾಡಲಿದ್ದಾರೆ. ಇನ್ನು ಇಂದು ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ಹೆಚ್‌ಡಿಕೆ ನಾಳೆಯಿಂದಲೇ ಚುನಾವಣೆಗೆ ರಣತಂತ್ರ ಶುರು ಮಾಡಲಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಆಟೋ ಪಾರ್ಕಿಂಗ್ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ಗಲಾಟೆ – ಕೋಮು ಸಂಘರ್ಷವಲ್ಲ ಎಂದು ಪೊಲೀಸರಿಂದ ಸ್ಪಷ್ಟನೆ..!