ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿ ಮುಖ್ಯಸ್ಥರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರನ್ನಾಗಿ ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಶಾ ಪುತ್ರ ಜಯ್ ಶಾ, ಬಿಸಿಸಿಐನ ಹಲವು ಪ್ರಭಾವಿ ಸ್ಥಾನಗಳನ್ನು ನಿರ್ವಹಿಸಿದ್ದರು. ಏಷ್ಯನ್ ಕ್ರಿಕೆಟ್ ಸಂಸ್ಥೆಯಲ್ಲೂ ಜಯ್ ಶಾ ಮಹತ್ವದ ಹುದ್ದೆ ಲೀಡ್ ಮಾಡಿದ್ದರು.
35 ವರ್ಷದ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರುತ್ತಿದ್ದಂತೆ, ಐಸಿಸಿ ಮುಖ್ಯಸ್ಥ ಹುದ್ದೆಗೇರುತ್ತಿರುವ ಅತೀ ಕಿರಿಯ ವ್ಯಕ್ತಿ ಎನ್ನುವ ಗರಿಮೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಈ ಹುದ್ದೆಯನ್ನು ಅಲಂಕರಿಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಬಿಸಿಸಿಐನ ಯಶಸ್ವಿ ಕಾರ್ಯದರ್ಶಿ : ಜಯ್ ಶಾ 2019 ರಿಂದ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ಮಹತ್ವದ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಷ್ಟೇ ಅಲ್ಲದೆ ಐಸಿಸಿ ಅಧ್ಯಕ್ಷ ಸ್ಥಾನಕ್ಕೇರುವ ಮುನ್ನ ದೇಶೀಯ ಕ್ರಿಕೆಟ್ ಆಡುವ ಭಾರತೀಯ ಆಟಗಾರರಿಗೆ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳೊಂದಿಗೆ ಬಹುಮಾನ ಮೊತ್ತ ನೀಡುವ ಪ್ರಮುಖ ನಿರ್ಧಾರವನ್ನು ಜಯ್ ಶಾ ಕೈಗೊಂಡಿದ್ದರು. ಇಂತಹ ಮಹತ್ವದ ನಿರ್ಧಾರಗಳೊಂದಿಗೆ ಭಾರತೀಯ ಕ್ರಿಕೆಟ್ನ ಉತ್ತೇಜನಕ್ಕೆ ಕಾರಣರಾಗಿರುವ ಜಯ್ ಶಾ ಅವರು ಇದೀಗ ಐಸಿಸಿ ಮುಖ್ಯಸ್ಥ ಸ್ಥಾನಕ್ಕೇರಿರುವುದರಿಂದ ಅವರ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ.
ಐಸಿಸಿ ಅಧ್ಯಕ್ಷರಾದ ಭಾರತೀಯರು : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಈವರೆಗೆ ನಾಲ್ವರು ಭಾರತೀಯರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್. ಇದೀಗ ಈ ಹುದ್ದೆಗೇರಿದ ಐದನೇ ಭಾರತೀಯನಾಗಿ ಜಯ್ ಶಾ ಹೊರಹೊಮ್ಮಿದ್ದಾರೆ. ಅದು ಸಹ ತಮ್ಮ 35ನೇ ವಯಸ್ಸಿನಲ್ಲಿ ಎಂಬುದು ವಿಶೇಷ.
ಇದನ್ನೂ ಓದಿ : ದರ್ಶನ್ ಬಳ್ಳಾರಿ ಜೈಲಿಗೆ.. ಉಳಿದವರು ಎಲ್ಲಿಗೆ ಗೊತ್ತಾ? ಇಲ್ಲಿದೆ ಪಟ್ಟಿ..!