ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅವರು ಹಾಗೂ ಇರಾನ್ ವಿದೇಶಾಂಗ ಸಚಿವ ಹುಸೈನ್ ಅಮೀರ್ ಅಬ್ದೋಲ್ಲಾಹಿನ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಿನ್ನೆ ಅಪಘಾತಕ್ಕೀಡಾಗಿತ್ತು. ಆದರೆ ಈಗ ಅವರು ಸಾವಿಗೀಡಾಗಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ಐಆರ್ಎನ್ಎ ವರದಿ ಮಾಡಿದೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ಅವರ ಜೊತೆಗಿದ್ದ ಇರಾನ್ ವಿದೇಶಾಂಗ ಸಚಿವ ಹುಸೈನ್ ಅಮೀರ್ ಅಬ್ದೋಲ್ಲಾಹಿನ್ ಸೇರಿ 5 ಮಂದಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇರಾನ್ ಹಾಗೂ ಅಜೆರ್ಬೈಜಾನಿ ಗಡಿಯಲ್ಲಿ ನಿನ್ನೆ ಅಜೆರ್ಬೈಜಾನಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಖಲಾಸಿ ಧಾಮ್ ಅಣೆಕಟ್ಟನ್ನು ಉದ್ಘಾಟಿಸಿದ್ದರು. ಈ ಸಮಾರಂಭಕ್ಕೆ ಇರಾನ್ ಅಧ್ಯಕ್ಷ ರೈಸಿ ಹಾಗೂ ವಿದೇಶಾಂಗ ಸಚಿವರು ಹೋಗಿದ್ದರು.
ಅಲ್ಲಿಂದ ಇರಾನ್ನ ತಬ್ರೀಜ್ಗೆ ಆಗಮಿಸುವ ವೇಳೆ ಅವರಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಅಧ್ಯಕ್ಷ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಮತ್ತು ಇತರ ಅಧಿಕಾರಿಗಳಿದ್ದ ಹೆಲಿಕಾಪ್ಟರ್ ಟೇಕಾಫ್ ಆದ ಸುಮಾರು 30 ನಿಮಿಷಗಳ ನಂತರ ರಾಡಾರ್ ಸಂಪರ್ಕ ಕಳೆದುಕೊಂಡಿತು. ಕೂಡಲೇ ಹೆಲಿಕಾಪ್ಟರ್ಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಳು ನಡೆದವು. ಆದರೆ ಈಗ ಇರಾನ್ನ ರಾಜ್ಯ ಮಾಧ್ಯಮಗಳು ಇದೊಂದು ಅಪಘಾತ ಎಂದು ಹೇಳಿದ್ದು, ಇರಾನ್ ಅಧ್ಯಕ್ಷರು ಈ ದುರಂತದಲ್ಲಿ ಸಾವನ್ನಪ್ಪಿರುವುದನ್ನು ಖಚಿತಪಡಿಸಿವೆ.
ದಟ್ಟ ಮಂಜು ಆವರಿಸಿದ ಅರಣ್ಯ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದರಿಂದ ಅದರಲ್ಲಿದ್ದವರು ಜೀವಂತ ಪತ್ತೆಯಾಗುವ ಸಾಧ್ಯತೆ ಕಡಿಮೆ ಇತ್ತು. ಆದರೂ ರೈಸಿ ಅವರ ಸುರಕ್ಷತೆಗಾಗಿ ಪ್ರಾರ್ಥನೆಗಳು ನಡೆದಿದ್ದವು. 12 ಗಂಟೆಗೂ ಅಧಿಕ ಸತತ ಶೋಧ ಕಾರ್ಯಾಚರಣೆ ನಡೆಸಿದರೂ ರೈಸಿ ಹಾಗೂ ಇತರೆ ಪ್ರಯಾಣಿಕರನ್ನು ಪತ್ತೆ ಮಾಡುವುದು ಸಾಧ್ಯವಾಗಿರಲಿಲ್ಲ. ಟರ್ಕಿ ರವಾನಿಸಿದ ಡ್ರೋನ್ ದೃಶ್ಯಗಳಲ್ಲಿ, ಹೆಲಿಕಾಪ್ಟರ್ ಪರ್ವತದ ಕೆಳಭಾಗಕ್ಕೆ ಹೋಗಿ ಅಪ್ಪಳಿಸಿರುವುದು ಗೊತ್ತಾಗಿತ್ತು.
ಇದನ್ನೂ ಓದಿ : ರೇವ್ ಪಾರ್ಟಿಯಲ್ಲಿ ಬಾಲಿವುಡ್, ಟಾಲಿವುಡ್ ನಟ-ನಟಿಯರು : ಯಾರೆಲ್ಲಾ ಇದ್ರೂ ಗೊತ್ತಾ?