ಅಯೋಧ್ಯೆ : ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಅಯೋಧ್ಯೆ ರಾಮಮಂದಿರದ ವಿಗ್ರಹ ಪ್ರಾಣಪ್ರತಿಷ್ಠಾಪನೆಯ ಕುರಿತು ಮತ್ತೊಂದು ಸಂತಸದ ಸುದ್ದಿ ಹೊರಬಿದ್ದಿದೆ. ನೂತನವಾಗಿ ನಿರ್ಮಾಣವಾಗಿರುವ ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗುವ ಮೂರ್ತಿ ಯಾವುದು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.
ಹೌದು. ಕರುನಾಡಿನ ಯುವಕ ಕೆತ್ತಿರುವ ಬಾಲರಾಮ ಅಯೋಧ್ಯೆ ಗರ್ಭಗುಡಿಯೊಳಗೆ ಅಲಂಕರಿಸಲಿದ್ದಾನೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ ಬಾಲರಾಮನ ಮೂರ್ತಿ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಹೇಳಿದೆ.
ಈಗಾಗಲೇ 3 ಮೂರ್ತಿಗಳ ಕೆತ್ತನೆ ಕಾರ್ಯ ಮುಗಿದಿದ್ದು, ಡಿ.29 ರಂದು ಮತದಾನ ಪ್ರಕ್ರಿಯೆ ಮೂಲಕ ಆಯ್ಕೆ ನಡೆದಿತ್ತು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿನ 11 ಸದಸ್ಯರು ಅತ್ಯುತ್ತಮ ಮೂರ್ತಿಯನ್ನು ಆಯ್ಕೆ ಮಾಡಿದ್ದಾರೆ. ಒಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿದರೆ ಇನ್ನುಳಿದ ಎರಡು ಮೂರ್ತಿಯನ್ನು ರಾಮ ದೇಗುಲದ ಆವರಣದಲ್ಲಿಯೇ ಇಡುವುದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿಕೊಂಡಿದೆ.
ಬಾಲರಾಮನ ಆಯ್ಕೆಗೆ ಕಾರಣವೇನು?
ವಿಗ್ರಹ ಕಡೆಯಲು ಬಳಸಿದ ಶಿಲೆಯ ಗುಣಮಟ್ಟ, ರಾಮನ ಬಾಲ್ಯದ ನೋಟ, ವಿಗ್ರಹಕ್ಕೆ ಇರುವ ಸೌಂದರ್ಯ, ಆಕರ್ಷಣೆ, ವಿಗ್ರಹಕ್ಕೆ ಇರುವ ದೈವತ್ವದ ಕಳೆ, ಭಾವ, ವಿಗ್ರಹದ ರಚನಾತ್ಮಕ ಸ್ವರೂಪ, ಕೆತ್ತನೆಯ ಗುಣಮಟ್ಟ ಎಲ್ಲವನ್ನು ಪರಿಗಣಿಸಲಾಗಿದೆ.
ಈ ಹಿಂದೆ ಅರುಣ್ ಯೋಗಿರಾಜ್ ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾದ ಶಂಕರಾಚಾರ್ಯರು ಹಾಗೂ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಷ್ಠಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಕೂಡಾ ಕೆತ್ತುವ ಮೂಲಕ ಪ್ರಧಾನಿ ಮೋದಿ ಸೇರಿದಂತೆ ಇಡೀ ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇದನ್ನೂ ಓದಿ : ಮಕರ ಜ್ಯೋತಿ ಪ್ರಜ್ವಲಿಸುವ ದಿನವೇ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ..!