ಮುಂಬೈ: ಮರಾಠಿ ಚಿತ್ರರಂಗದ ಖ್ಯಾತ ನಟಿ ಊರ್ಮಿಲಾ ಕೊಠಾರೆ ಅಲಿಯಾಸ್ ಊರ್ಮಿಳಾ ಕಾನೇಟ್ಕರ್ ಅವರ ಕಾರು ಹರಿದು ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಕಂಡಿವಲಿಯ ಪೊಯಿಸರ್ ಮೆಟ್ರೋ ನಿಲ್ದಾಣದ ಬಳಿ ಊರ್ಮಿಲಾ ಕೊಠಾರೆ ಅವರ ಕಾರು, ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ನಟಿ ಉರ್ಮಿಳಾ ಕೊಠಾರೆ ಚಿತ್ರೀಕರಣ ಮುಗಿಸಿ ಮನೆಗೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಮೆಟ್ರೋ ರೈಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಕಾರ್ಮಿಕರಿಗೆ ನಟಿಯ ಕಾರು ಡಿಕ್ಕಿ ಹೊಡೆದಿದೆ.
ಅಪಘಾತ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಟಿಯ ಕಾರು ಅತಿವೇಗದಲ್ಲಿದ್ದು, ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಪರಿಣಾಮ ಮೆಟ್ರೋ ರೈಲಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ನಟಿ ಉರ್ಮಿಳಾ ಹಾಗೂ ಚಾಲಕ ಕೂಡ ಗಾಯಗೊಂಡಿದ್ದಾರೆ ಎಂದರು.
ಊರ್ಮಿಲಾ ಕೊಠಾರೆ ಅವರು ಮರಾಠಿಯ ದುನಿಯಾದಾರಿ, ಹಿಂದಿಯ ಥ್ಯಾಂಕ್ ಗಾಡ್, ಶುಭಮಂಗಲ್ ಸಾವಧಾನ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಊರ್ಮಿಳಾ ಅವರು ಕೂಡ ಅಪಘಾತದಲ್ಲಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಊರ್ಮಿಳಾ ಕಾರಿನಲ್ಲಿ ಮಲಗಿದ್ದಳು. ಅಪಘಾತ ಸಂಭವಿಸಿದಾಗ ಸಮಯಕ್ಕೆ ಸರಿಯಾಗಿ ಏರ್‌ಬ್ಯಾಗ್ ತೆರೆದುಕೊಂಡಿದ್ದರಿಂದ ಜೀವ ಉಳಿದಿದೆ ಎಂದು ಅವರ ಪತಿ ಆದಿನಾಥ್ ಕೊಠಾರೆ ತಿಳಿಸಿದ್ದಾರೆ. ಸದ್ಯ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಧರ್ಮ ಕೀರ್ತಿರಾಜ್ ಅಭಿನಯದ ‘ತಲ್ವಾರ್’ ಮೊದಲ ಹಾಡು ರಿಲೀಸ್!