ಬೀದರ್ : ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಮೇಲೆ ಗಂಭೀರ ಆರೋಪ ಮಾಡಿ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ರಾಜ್ಯಾದ್ಯಂತ ಸರ್ಕಾರ ಹಾಗೂ ವಿಪಕ್ಷಗಳ ಮಧ್ಯೆ ಕೋಲಾಹಲ ಸೃಷ್ಟಿಸುತ್ತಿದೆ. ಇದರ ಬೆನ್ನಲ್ಲೇ ಮೃತ ಸಚಿನ್ ಪಾಂಚಾಳ್ ನಿವಾಸಕ್ಕೆ ಬೀದರ್ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಸಚಿನ್ ಪಾಂಚಾಳ್ ಮನೆಗೆ ಸಚಿವ ಈಶ್ವರ್ ಖಂಡ್ರೆ ಆಗಮಿಸುತ್ತಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಚಿವ ಈಶ್ವರ್ ಖಂಡ್ರೆ ಅವರ ಎದುರೇ ಪೊಲೀಸರ ವಿರುದ್ಧ ಸಚಿನ್ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಈಶ್ವರ್ ಖಂಡ್ರೆ ಜೊತೆ ನಿವಾಸಕ್ಕೆ ಬಂದಿದ್ದ ಪೊಲೀಸರ ವಿರುದ್ಧ ಸಚಿನ್ ಸಹೋದರಿಯರು ಭಾರೀ ಅಸಮಾಧಾನ ವ್ಯಕ್ತಪಡಿಸಿ ಅವರನ್ನು ಮನೆಯಿಂದ ಹೊರಹಾಕಿದ್ದಾರೆ.
ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ನಮಗೆ ನ್ಯಾಯ ಕೊಡಲು ವಿಫಲರಾಗಿದ್ದಾರೆ. ಕೂಡಲೇ ಪೊಲೀಸರು ನಮ್ಮ ಮನೆಯಿಂದ ಹೊರ ಹೋಗಬೇಕು. ಒಬ್ಬರೇ ಒಬ್ಬ ಪೊಲೀಸರು ಕೂಡ ನಮ್ಮ ಮನೆಗೆ ಕಾಲಿಡೋದು ಬೇಡ ಎಂದು ಎಲ್ಲರ ಎದುರೇ ಆಕ್ರೋಶ ವ್ಯಕ್ತಪಡಿಸಿ ಪೊಲೀಸರನ್ನೇ ಮನೆಯಿಂದ ಆಚೆ ಕಳಿಸಿದ್ದಾರೆ. ಸಚಿವ ಈಶ್ವರ್ ಖಂಡ್ರೆ ಅವರ ಎದುರೇ ಪೊಲೀಸರ ವಿರುದ್ಧ ಸಚಿನ್ ಕುಟುಂಬಸ್ಥರು ಕಿಡಿಕಾರಿದ್ದಾರೆ.
ರಾಜಕೀಯ ಮುಖಂಡರು, ಸ್ಥಳೀಯ ನಾಯಕರು ಎಷ್ಟೇ ಸಮಾಧಾನ ಮಾಡಿದ್ರೂ ಸಚಿನ್ ಕುಟುಂಬಸ್ಥರು ಮಾತ್ರ ಪೊಲೀಸರ ವಿರುದ್ಧದ ಆಕ್ರೋಶವನ್ನು ಕಡಿಮೆ ಮಾಡಿಲ್ಲ. ಕೊನೆಗೂ ಸಚಿನ್ ಸಹೋದರಿಯರ ಆಕ್ರೋಶಕ್ಕೆ ಮಣಿದ ಬೀದರ್ ಜಿಲ್ಲಾ ಎಸ್ಪಿ ಪ್ರದೀಪ್ ಗುಂಟಿ ಅವರು ಸಚಿನ್ ಮನೆಯಿಂದ ಕಾಲ್ಕಿತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಜೊತೆ ಬಂದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಕೂಡ ಸಚಿನ್ ಮನೆಗೆ ಪ್ರವೇಶಿಸದೇ ಮನೆಯಿಂದ ಹೊರಗೆ ನಿಂತಿದ್ದರು. ಅಷ್ಟರ ಮಟ್ಟಿಗೆ ಪೊಲೀಸರ ವಿರುದ್ಧ ಸಚಿನ್ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಯಾವೊಬ್ಬ ಪೊಲೀಸರನ್ನು ಮನೆಯೊಳಗೆ ಬಿಟ್ಟು ಕೊಳ್ಳದ ಸಚಿನ್ ಅಕ್ಕ-ತಂಗಿಯರು ಸಚಿವ ಈಶ್ವರ್ ಖಂಡ್ರೆ ಜೊತೆ ಮಾತನಾಡಿದ್ದಾರೆ. ಸಚಿನ್ ಕುಟುಂಬಸ್ಥರಿಗೆ ಸಚಿವ ಈಶ್ವರ್ ಖಂಡ್ರೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಕರ್ತವ್ಯ ಲೋಪ ಎಸಗಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಸಚಿನ್ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಯಾವುದೇ ಕ್ಷಣ ಐಶ್ವರ್ಯಾ ಗೋಲ್ಡ್ ಕೇಸ್ಗೆ ED ಎಂಟ್ರಿ?