ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯು ಅದ್ಧೂರಿಯಾಗಿ ಹಾಗೂ ದೊಡ್ಡ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ. ಈ ಹಿನ್ನೆಲೆ ಡಿಸೆಂಬರ್ 31ರಂದು ರಾತ್ರಿಯಿಡೀ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮನೆಮಾಡಿರುತ್ತದೆ. ಇದನ್ನು ಮನಗಂಡಿರುವ ‘ನಮ್ಮ ಮೆಟ್ರೋ‘ ಬೆಂಗಳೂರಿನ ಪ್ರಯಾಣಿಕರಿಗಾಗಿ ಸಿಹಿಸುದ್ದಿಯೊಂದನ್ನು ನೀಡಿದೆ. ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಜನರಿಗೆ ಅಂದು ಮಧ್ಯರಾತ್ರಿವರೆಗೆ ಮೆಟ್ರೋ ಸಂಚಾರ ಅವಧಿ ವಿಸ್ತರಿಸಲು ಮುಂದಾಗಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ತನ್ನ ಸೇವಾ ಅವಧಿಯನ್ನು ವಿಸ್ತರಿಸಿದೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕೊನೆಯ ರೈಲು ಜನವರಿ 1ರ ಹೊಸ ವರ್ಷದಂದು ಮುಂಜಾನೆ 2 ಗಂಟೆಗೆ ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಎಲ್ಲ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2.40ಕ್ಕೆ ಹೊರಡಲಿದೆ ಎಂದು ಮೆಟ್ರೋ ತಿಳಿಸಿದೆ.
ಎಂ.ಜಿ.ರೋಡ್ ಮೆಟ್ರೋ ಸ್ಟೇಷನ್ ನಲ್ಲಿ ಸ್ಟಾಪ್ ಇಲ್ಲ : ಬೆಂಗಳೂರಿನಲ್ಲಿ ಹೊಸ ವರ್ಷದ ಹಾಟ್‌ಸ್ಪಾಟ್‌ಗಳಾದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್‌ಗಳಿಗೆ ಅಂದು ಲಕ್ಷಾಂತರ ಮಂದಿ ಬರುತ್ತಾರೆ. ಡಿಸೆಂಬರ್ 31ರ ಸಂಜೆಯಿಂದಲೇ ಅಲ್ಲಿ ಜನಜಂಗುಳಿ ಇರುತ್ತದೆ. ಈ ಎಲ್ಲ ಪ್ರದೇಶಕ್ಕೂ ಹತ್ತಿರವಿರುವ ಮೆಟ್ರೋ ನಿಲ್ದಾಣವೆಂದರೆ ಅದು ಎಂ.ಜಿ ರೋಡ್ ಮೆಟ್ರೋ ನಿಲ್ದಾಣ. ಹಾಗಾಗಿ ಅಂದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗಿರುವ ಕಾರಣ ಇಲ್ಲಿ ಜನದಟ್ಟಣೆ ತಗ್ಗಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಈ ಬಾರಿ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಡಿಸೆಂಬರ್ 31ರಂದು ರಾತ್ರಿ 11 ಗಂಟೆಯಿಂದ ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚುವುದಾಗಿ ತಿಳಿಸಿದೆ.
ಡಿಸೆಂಬರ್ 31ರಂದು ರಾತ್ರಿ 11 ಗಂಟೆಯಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನದ ದ್ವಾರಗಳನ್ನು ಮುಚ್ಚಲಾಗುತ್ತದೆ. ಎಂ.ಜಿ.ರಸ್ತೆಗೆ ಬಂದು ಇಳಿಯಬೇಕು ಎನ್ನುವವರು ಸಮೀಪದಲ್ಲೇ ಇರುವ ಟ್ರಿನಿಟಿ ಮೆಟ್ರೋ ನಿಲ್ದಾಣ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಇಳಿಯಬಹುದು ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಕ್ಷರಿ ಮರು ಆಯ್ಕೆ..!