ಬೆಂಗಳೂರು : ನಿಮ್ಮ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇನ್ನೂ ಅಳವಡಿಕೆ ಮಾಡಿಲ್ಲವೇ? ಹಾಗಾದರೆ ನಿಮಗಿದೋ ಗುಡ್ ನ್ಯೂಸ್. ಹೈಕೋರ್ಟ್ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವುನ್ನು ನ.20ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದಿಂದ ಈಗಾಗಲೇ ಎಲ್ಲಾ ಮೋಟಾರು ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (High Security Registration Plate- HSRP) ಅಳವಡಿಕೆ ಮಾಡಿಸಿಕೊಳ್ಳಲು ನಾಲ್ಕು ಬಾರಿ ಗಡುವು ನೀಡಿತ್ತು. ಕೊನೆಯ ಬಾರಿ ಸೆ.14ರಂದು ಈ ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನ ಎಂದು ಹೇಳಿತ್ತು.
ಆದರೆ, ಈ ಬಗ್ಗೆ (ಸೆ.18) ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ ಇದ್ದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಪೊಲೀಸರು ಯಾವುದೇ ದಂಡವನ್ನು ವಿಧಿಸಿರಲಿಲ್ಲ. ಇಂದು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ, ವಕೀಲರ ಮನವಿ ಮೇರೆಗೆ HSRP ನಂಬರ್ ಪ್ಲೇಟ್ ಅಳವಡಿಕೆ ಅವಧಿಯನ್ನು 2024ರ ನವೆಂಬರ್ 20ರ ವರೆಗೆ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಈವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಆತಂಕದಲ್ಲಿದ್ದ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದೆ.
HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?
https://transport.karnataka.gov.in ಅಥವಾ www.siam.in ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು.
ಇಲ್ಲಿ Book HSRP ಕ್ಲಿಕ್ ಮಾಡಿ.
ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿ.
ನಿಮ್ಮ ವಾಹನದ ವಿವರವನ್ನು ಅಲ್ಲಿ ನಮೂದಿಸಿ.
ನಿಮ್ಮ ಹತ್ತಿರದ ಅಥವಾ ನಿಮ್ಮ ಡೀಲರ್ ಶೋ ರೂಂ ಆಯ್ಕೆ ಮಾಡಿ
HSRP ನಂಬರ್ ಪ್ಲೇಟ್‌ಗೆ ಅಲ್ಲಿ ನಮೂದಿಸಿದ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಿ
ಮೊಬೈಲ್ ನಂಬರ್‌ಗೆ ಬರುವ ಒಟಿಪಿಯನ್ನು ನಮೂದಿಸಿ
HSRP ನಂಬರ್ ಪ್ಲೇಟ್ ಅಳವಡಿಸಲು ನಿಮ್ಮ ಅನುಕೂಲದ ದಿನಾಂಕವನ್ನು ಪಡೆದುಕೊಳ್ಳಿ.
ಇದನ್ನೂ ಓದಿ : ಮಾಜಿ ಬಿಗ್ ಬಾಸ್ ವಿನ್ನರ್ಗೆ ಬೆದರಿಕೆ ಕರೆ.. ಭದ್ರತೆ ಹೆಚ್ಚಿಸಿದ ಪೊಲೀಸರು..!