ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಕ್ಷರಿ ಅವರು ಮರು ಆಯ್ಕೆಯಾಗಿದ್ದಾರೆ.
2024-29ನೇ ಅವಧಿಯ ಅಧ್ಯಕ್ಷ ಹಾಗೂ ರಾಜ್ಯ ಖಜಾಂಚಿ ಸ್ಥಾನಕ್ಕೆ ನಿನ್ನೆ ಕಬ್ಬನ್ ಪಾರ್ಕ್‌ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆಯಿತು. ಬಳಿಕ ನಡೆದ ಮತ ಎಣಿಕೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿ.ಎಸ್.ಷಡಕ್ಷರಿ 507 ಮತ ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಬಿ.ಪಿ.ಕೃಷ್ಣಗೌಡ ವಿರುದ್ಧ 65 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿ.ಎಸ್ .ಷಡಾಕ್ಷರಿಗೆ 507 ಮತಗಳು ಬಂದರೆ, ಬಿ.ಪಿ.ಕೃಷ್ಣಗೌಡಗೆ 442 ಮತಗಳು ಲಭಿಸಿದ್ದವು. ಖಚಾಂಜಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ನಾಗರಾಜ ಆರ್.ಜುಮ್ಮನ್ನವರ(ಷಡಾಕ್ಷರಿ ಬಣ), ವಿ.ವಿ.ಶಿವರುದ್ರಯ್ಯ (ಬಿ.ಪಿ.ಕೃಷ್ಣಗೌಡ ಬಣ) ವಿರುದ್ಧ ಕೇವಲ 18 ಮತಗಳ ಅಂತರದಿಂದ ಸೋಲು ಅನುಭವಿಸಿದರು.
ವಿ.ವಿ.ಶಿವರುದ್ರಯ್ಯ 485 ಮತ ಪಡೆದರೆ, ನಾಗರಾಜ ಆರ್.ಜುಮ್ಮನ್ನವರಗೆ 467 ಮತಗಳು ಬಂದಿವೆ. ಬೆಂಗಳೂರು ನಗರ ಜಿಲ್ಲೆಯ 102 ರಾಜ್ಯ ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ, ಜಿಲ್ಲಾ ರಾಜ್ಯ ಪರಿಷತ್ ಸದಸ್ಯರು, ಜಿಲ್ಲಾ ಕಾರ್ಯದರ್ಶಿ, ತಾಲೂಕು ಶಾಖೆಯ ಅಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು, ಕಾರ್ಯದರ್ಶಿ ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರು ಸೇರಿ ಒಟ್ಟು 949 ಮತದಾರರು ಮತ ಚಲಾಯಿಸಿದ್ದರು.
ಹಲವು ವಿಶೇಷತೆಗೆ ಸಾಕ್ಷಿ : 5.25 ಲಕ್ಷ ಸರ್ಕಾರಿ ನೌಕರರನ್ನು ಹೊಂದಿರುವ ಸಂಘದ ಚುನಾವಣೆ ಈ ಬಾರಿ ಹಲವು ವಿಶೇಷತೆಗೆ ಸಾಕ್ಷಿಯಾಗಿತ್ತು. ಪ್ರಭಾವಿ ಸಚಿವರ ಸಂಬಂಧಿಕರಾದ ಬಿ.ಪಿ.ಕೃಷ್ಣಗೌಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಮೈಸೂರು ಭಾಗದ ಎಂಎಲ್ಸಿರೊಬ್ಬರು ಕೃಷ್ಣಗೌಡ ಪರವಾಗಿ ತೆರೆಮರೆಯಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿತ್ತು. ಹಣ, ತೋಳ್ಳಲ ಜತೆಗೆ ಮತದಾರರಿಗೆ ಹಲವು ಆಮಿಷವೊಡ್ಡಲಾಗಿತ್ತು. ಇದರಿಂದಾಗಿ ಷಡಾಕ್ಷರಿ ಮತ್ತು ಕೃಷ್ಣಗೌಡಗೆ ನಡುವೆ ಭಾರಿ ಪೈಪೋಟಿ ನಡೆದಿತ್ತು. ಅಂತಿಮವಾಗಿ ಮತದಾರರು ಷಡಾಕ್ಷರಿ ಅವರನ್ನು ಕೈಹಿಡಿದಿದ್ದು, 2ನೇ ಬಾರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ : ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದ ಬಸ್ – 8 ಮಂದಿ ಸಾವು..!