ನವದೆಹಲಿ : ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟದ ಕಾವು ತೀವ್ರಗೊಂಡಿರುವ ಬೆನ್ನಲ್ಲೇ ಇದೀಗ ರಾಜ್ಯ ಕಾಂಗ್ರೆಸ್ನಲ್ಲೂ ಗುಂಪು ಬಡಿದಾಟ ಶುರುವಾಗಿದೆ. ಕಮಲ ಪಡೆಯಲ್ಲಿ ಯತ್ನಾಳ್ ಟೀಂ ವರ್ಸಸ್ ವಿಜಯೇಂದ್ರ ಟೀಂ ಆದ್ರೆ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ವರ್ಸಸ್ ಡಿಕೆ ಶಿವಕುಮಾರ್ ಬಣಗಳ ಜಗಳ ತಾರಕಕ್ಕೇರಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಒಂದೂವರೇ ವರ್ಷದಲ್ಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಬಣ ಬಡಿದಾಟ ಶುರುವಾಗಿದ್ದು ಇದೀಗ ಹೈಕಮಾಂಡ್ ಅಂಗಳಕ್ಕೂ ತಲುಪಿದೆ.
ಡಿಸಿಎಂ ಡಿಕೆ ಶಿವಕುಮಾರ್ ವಿದೇಶ ಪ್ರವಾಸಕ್ಕೆ ಹೋದ ಬೆನ್ನಲ್ಲೇ ಅಲರ್ಟ್ ಆದ ಸಿಎಂ ಸಿದ್ದರಾಮಯ್ಯ ಟೀಂ ಡಿನ್ನರ್ ನೆಪದಲ್ಲಿ ಮಹತ್ವದ ಚರ್ಚೆನಡೆಸಿದೆ. ಸಚಿವರಾದ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ಕೆ.ಎನ್.ರಾಜಣ್ಣ ಸೇರಿ ಹಲವರು ಡಿನ್ನರ್ ಮೀಟಿಂಗ್ ನಡೆಸಿದ್ದರು. ಈ ಮಹತ್ವದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿ ಡಿಸಿಎಂ ಡಿಕೆಶಿ ಬಣಕ್ಕೆ ಚಕ್ರವ್ಯೂಹ ರಚಿಸಲು ಕಾರ್ಯತಂತ್ರ ರೂಪಿಸಿರುವುದು ಗುಟ್ಟಾಗಿ ಏನು ಉಳಿದಿಲ್ಲ.
ಇದೀಗ ಸಚಿವರ ಡಿನ್ನರ್ ಮೀಟಿಂಗ್ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ಗೂ ತಲುಪಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಸಚಿವರ ಡಿನ್ನರ್ ಸಭೆ ಬಗ್ಗೆ ದೂರು ನೀಡಿದ್ದಾರೆ. ಫಾರಿನ್ನಿಂದ ವಾಪಸ್ ಬಂದರೂ ಬೆಂಗಳೂರಿಗೆ ಬಾರದೇ ದಿಲ್ಲಿಯಲ್ಲೇ ಡಿಕೆಶಿ ಉಳಿದುಕೊಂಡಿದ್ದು ನಿನ್ನೆ ತಡರಾತ್ರಿ ಕೆ.ಸಿ ವೇಣುಗೋಪಾಲ್ ಮೀಟ್ ಮಾಡಿ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.
ಸರ್ಕಾರದಲ್ಲಿ ಡಿಸಿಎಂ ಆಗಿರುವ ನಾನು ವಿದೇಶಕ್ಕೆ ಹೋಗಿದ್ದಾಗ ಡಿನ್ನರ್ ನೆಪದಲ್ಲಿಗೆ ಸಚಿವರು ಸೇರಿದ್ದು ಸರಿಯಲ್ಲ. ಇದರಿಂದ ಪಕ್ಷದ ವರ್ಚಸ್ಸಿಗೆ ತುಂಬಾ ಧಕ್ಕೆಯಾಗುತ್ತಿದೆ. ಡಿನ್ನರ್ ಸಭೆಗಳಿಂದ ಹೊರಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇರೆಯದ್ದೇ ಸಂದೇಶ ರವಾನೆಯಾಗ್ತಿದೆ. ಇದಕ್ಕೆಲ್ಲಾ ಈಗಲೇ ಬ್ರೇಕ್ ಹಾಕಿ ಎಂದು ಕೆ.ಸಿ ವೇಣುಗೋಪಾಲ್ ಅವರ ಬಳಿ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.
ಇನ್ನೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಸುಮ್ನೆ ಚರ್ಚೆ ಹುಟ್ಟುಹಾಕ್ತಿದ್ದಾರೆ. ಬದಲಾವಣೆ ಮಾಡೋದು ಹೈಕಮಾಂಡ್ಗೆ ಬಿಟ್ಟ ವಿಚಾರ. ಆದ್ರೆ ಹಾದಿಬೀದಿಯಲ್ಲೆಲ್ಲಾ ಅಧ್ಯಕ್ಷ ಸ್ಥಾನದ ಬಗ್ಗೆ ಮಾತಾಡಿಕೊಂಡಿರಬಾರದು. ಸಚಿವ ಸಂಪುಟ ವಿಸ್ತರಣೆ ಆಗೋವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬೇಡ ಎಂದು ಹೈಕಮಾಂಡ್ ಮುಂದೆ ಸ್ಪಷ್ಟವಾಗಿ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ : ಮುಖ್ಯವಾಹಿನಿಗೆ ನಕ್ಸಲರು.. ನಾಳೆ ಚಿಕ್ಕಮಗಳೂರಲ್ಲಿ ನಕ್ಸಲರಿಂದ ಶಸ್ತ್ರಾಸ್ತ್ರ ತ್ಯಜಿಸುವ ಘೋಷಣೆ !