ಮಹಿಳೆಯರ ಬಗ್ಗೆ ಅಪಮಾನಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಮಹಿಳಾ ಆಯೋಗಕ್ಕೆ ದರ್ಶನ್ ವಿರುದ್ಧ ದೂರು ಸಲ್ಲಿಸಲಾಗಿದೆ. ಗೌಡತಿಯರ ಸೇನೆ ನಟ ದರ್ಶನ್ ವಿರುದ್ಧ ದೂರು ನೀಡಿದ್ದು, ಗೌಡತಿಯರ ಸೇನೆಯ ಜಯಶ್ರೀ, ರೇಣುಕಾ ನೇತೃತ್ವದಲ್ಲಿ ದೂರು ನೀಡಲಾಗಿದೆ.
ನಟ ದರ್ಶನ್ ವಿರುದ್ಧ ಲಿಖಿತ ರೂಪದಲ್ಲಿ ದೂರು ನೀಡಿದ್ದು, ಇವತ್ತು ಇವಳು ಇರುತ್ತಾಳೆ, ನಾಳೆ ಅವಳು ಬರ್ತಾಳೆ , ಅವರ ಅಜ್ಜಿನಾ ಬಡಿಯಾ, ಎನ್ನುವ ಮಾತುಗಳನ್ನು ಮೊನ್ನೆ ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿ ಪರ್ವದಲ್ಲಿ ದರ್ಶನ್ ಹೇಳಿದ್ದರು. ಈ ಹೇಳಿಕೆಗೆ ಒಕ್ಕಲಿಗ ಗೌಡತಿಯರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಇದು ಅವಮಾನ ಮಾಡುವಂಥದ್ದು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಹಾಗೂ ನಟನೊಬ್ಬ ಈ ರೀತಿ ಮಾತನಾಡಿದ್ದು ಅಪರಾಧ, ಈ ಕೂಡಲೇ ನಟ ದರ್ಶನ್ ಅವರನ್ನು ವಿಚಾರಣೆ ಮಾಡಿ ಎಂದು ಆಗ್ರಹ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಮುಜುಗರ ಆಗುವಂತೆ ದರ್ಶನ್ ಮಾತ್ನಾಡಿದ್ದಾರೆ. ದರ್ಶನ್ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು, ಈ ಬಗ್ಗೆ ಮಹಿಳಾ ಆಯೋಗ ಸೂಕ್ತ ಕ್ರಮ ಜರುಗಿಸಬೇಕು ಎಂದು ಗೌಡತಿಯರ ಸೇನೆ ಆಗ್ರಹಿಸಿದೆ.
ಫಿಲ್ಮ್ ಚೇಂಬರ್ ನಲ್ಲೂ ದೂರು : ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರಿಗೆ ಕಟು ನುಡಿಗಳಲ್ಲಿ ಟೀಕಿಸಿರುವ ನಟ ದರ್ಶನ್ ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆಯು ಫಿಲ್ಮ್ ಛೇಂಬರ್ ಗೆ ದೂರು ನೀಡಿದೆ. ಸಾರ್ವಜನಿಕ ವೇದಿಕೆಯ ಮೇಲೆ ಉಮಾಪತಿಗೆ ತಗಡು, ಗುಮ್ಮಿಸ್ಕೋತೀಯಾ ರೀತಿಯ ಪದಗಳನ್ನು ಆಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಾಟೇರ ಸಿನಿಮಾದ ಕಥೆ ಬರೆಯಿಸಿದ್ದು ನಾನು, ಅದು ನನ್ನದೇ ಟೈಟಲ್ ಎಂದು ಉಮಾಪತಿ ಗೌಡ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದಕ್ಕೆ ಉತ್ತರ ಎನ್ನುವಂತೆ ಕಾಟೇರ ಸಿನಿಮಾದ ಐವತ್ತನೇ ದಿನದ ಸಂಭ್ರಮದಲ್ಲಿ ದರ್ಶನ್ ತಿರುಗೇಟು ನೀಡಿದ್ದರು. ಅಲ್ಲದೇ, ತಗಡು ಮತ್ತು ‘ಪ್ರತಿ ಬಾರಿ ಯಾಕೆ ನಮ್ಮಿಂದ ಗುಮ್ಮಿಸ್ಕೋಳ್ತಿಯಾ’ ಎನ್ನುವ ಮಾತುಗಳನ್ನು ಆಡಿದ್ದರು. ಈ ಕುರಿತಂತೆ ಸಂಘಟನೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಈ ವಿಷಯದಲ್ಲಿ ದರ್ಶನ್ ಅವರು ಕ್ಷಮೆ ಕೇಳಬೇಕು. ಕ್ಷಮೆ ಕೇಳದೇ ಇದ್ದರೆ, ದರ್ಶನ್ ಮನೆಯ ಮುಂದೆ ನೂರಾರು ಕನ್ನಡ ಕಾರ್ಯಕರ್ತರು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಉಮಾಪತಿ ಮತ್ತು ದರ್ಶನ್ ವಿಚಾರ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿರ್ದೇಶಕರಾದ ತರುಣ್ ಸುಧೀರ್ ಮತ್ತು ಮಹೇಶ್ ಕುಮಾರ್ ಇಬ್ಬರೂ ದರ್ಶನ್ ಪರ ಬ್ಯಾಟ್ ಮಾಡುತ್ತಿದ್ದಾರೆ. ಇದಕ್ಕೆ ಕೌಂಟರ್ ಎನ್ನುವಂತೆ ಉಮಾಪತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.