ರಾಮನಗರ : ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮೂರು ಕ್ಷೇತ್ರಗಳ ಉಪಚುನಾವಣೆ ಮತದಾನ ಇಂದು ನಡೆಯುತ್ತಿದೆ. ಈಗಾಗಲೇ ಮೂರು ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣಾ ಇಲಾಖೆ ಹಾಗೂ ಜಿಲ್ಲಾಡಳಿತ ಭಾರೀ ಕಟ್ಟೆಚ್ಚರ ವಹಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ.
ಇನ್ನು ಮೂರು ಕ್ಷೇತ್ರಗಳ ಪೈಕಿ ರಾಮನಗರ ಜಿಲ್ಲೆಯ ಬೊಂಬೆಯೂರು ಚನ್ನಪಟ್ಟಣ ಕ್ಷೇತ್ರ ಹೆಚ್ಚು ಸದ್ದು ಮಾಡುತ್ತಿದೆ. ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಾದ ಬಿಜೆಪಿ-ಜೆಡಿಎಸ್ಗೆ ಚನ್ನಪಟ್ಟಣ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ನಿಂದ ಸಿಪಿ ಯೋಗೇಶ್ವರ್ ಹಾಗೂ 32 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವು ಕೇಂದ್ರ ಸಚಿವ ಕುಮಾರಸ್ವಾಮಿಯವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗಿದೆ. ಸದ್ಯ ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಈ ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ್-ನಿಖಿಲ್ ಕುಮಾರಸ್ವಾಮಿ ಅವರು ಅಭ್ಯರ್ಥಿಯಾಗಿದ್ದಾರೆ. ಈಗಾಗಲೇ ಈ ಇಬ್ಬರೂ ಕೂಡ ತಾವು ಎದುರಿಸಿದ ಕಳೆದ 2 ಚುನಾವಣೆಗಳನ್ನು ಸೋತಿದ್ದು, ಈ ಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ. ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಂಡಿರುವ ನಿಖಿಲ್, ಜೆಡಿಎಸ್ ಭದ್ರಕೋಟೆ, ಅಪ್ಪನ ಅಖಾಡದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಹೆಚ್ಡಿಕೆ ವಿರುದ್ಧ ಎರಡು ಬಾರಿ ಸೋತ ಸೈನಿಕ ಸಿಪಿವೈ ಕೂಡ ಮೂರನೇ ಬಾರಿ ಪರೀಕ್ಷೆಗಿಳಿದ್ದಾರೆ.
ಚನ್ನಪಟ್ಟಣದಲ್ಲಿ ಒಟ್ಟು 2,32,836 ಮತದಾರರಿದ್ದು, ಈ ಪೈಕಿ 1,12,271 ಪುರುಷ ಮತದಾರರು, 1,20,557 ಮಹಿಳಾ ಮತದಾರರಿದ್ದಾರೆ. 8,338 ಯುವ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 276 ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿದೆ. ನಗರ ಪ್ರದೇಶದಲ್ಲಿ 62, ಗ್ರಾಮೀಣ ಪ್ರದೇಶದಲ್ಲಿ 214 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. 119 ಮತಗಟ್ಟೆಗಳನ್ನ ಸೂಕ್ಷ್ಮ ಮತಗಟ್ಟೆಗಳು ಎಂದು ನಿರ್ಧರಿಸಲಾಗಿದೆ. 8 ವಿಶೇಷ ಮತಗಟ್ಟೆ, 5 ಸಖಿ ಮತಗಟ್ಟೆ, ವಿಶೇಷ ಚೇತನರಿಗಾಗಿ 1 ಮತಗಟ್ಟೆ, 1 ಯುವ ಮತಗಟ್ಟೆ, 1 ಸಾಂಪ್ರದಾಯಿಕ ಮತಗಟ್ಟೆ ತೆರೆಯಲಾಗಿದೆ. 54 ಕ್ಲಸ್ಟರ್ ಮತಗಟ್ಟೆಗಳಿಗೆ ಎಎಸ್ಐ ದರ್ಜೆಯ ಅಧಿಕಾರಿಗಳ ನೇಮಕ ಮಾಡಲಾಗಿದೆ. 8 ಪ್ಯಾರಾಮಿಲಿಟರಿ ಪಡೆ, ಪಿಆರ್ಒ, ಎಪಿಆರ್ಒ ಸೇರಿದಂತೆ 1252 ಭದ್ರತಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.
ಇನ್ನು ಚನ್ನಪಟ್ಟಣದಲ್ಲಿ ಒಕ್ಕಲಿಗ ಮತಗಳ ಪ್ರಾಬಲ್ಯವಿದೆ. 1.05 ಲಕ್ಷದಷ್ಟಿರುವ ಒಕ್ಕಲಿಗ ಮತಗಳೇ ನಿರ್ಣಾಯಕವಾಗಿದೆ. 40 ಸಾವಿರ ಪರಿಶಿಷ್ಟ ಪಂಗಡ, 32 ಸಾವಿರ ಮುಸ್ಲಿಂ, 21 ಸಾವಿರ ಹಿಂದುಳಿದ ವರ್ಗ, 8 ಸಾವಿರ ಕುರುಬ, 10 ಸಾವಿರಕ್ಕೂ ಹೆಚ್ಚು ಇತರೆ ಮತಗಳಿವೆ.
ಇದನ್ನೂ ಓದಿ : ಜಾರ್ಖಂಡ್ ವಿಧಾನಸಭೆ ಚುನಾವಣೆ – 43 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ…!