ಬೆಂಗಳೂರು : ನಗರದ ಎಲೆಕ್ಟ್ರಾನಿಕ್ ಸಿಟಿಯ G.R.ಫಾರ್ಮ್ ಹೌಸ್ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿವೆ. ಇದೀಗ ಈ ಪಾರ್ಟಿಯಲ್ಲಿ ಬಾಲಿವುಡ್, ಟಾಲಿವುಡ್ ನಟ-ನಟಿಯರು, ತೆಲುಗಿನ ಖ್ಯಾತ ನಟಿ ಹೇಮಾ ಹಾಗೂ ಕನ್ನಡದ ನಟಿಯರು ಭಾಗಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬವರಿಗೆ ಸೇರಿದ G.R.ಫಾರ್ಮ್ ಹೌಸ್ನಲ್ಲಿ ಆಂಧ್ರ ಮೂಲದ ವಾಸು ಎಂಬಾತ ಸನ್ ಸೆಟ್ TO ಸನ್ ರೈಸ್ ಕಾನ್ಸೆಪ್ಟ್ನ ರೇವ್ ಪಾರ್ಟಿ ಆಯೋಜಿಸಿದ್ದ. ಈ ಪಾರ್ಟಿಗೆ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಮೂಲಕ ನಟ-ನಟಿಯರು ಹಾಗೂ ಮಾಡೆಲ್ಗಳನ್ನು ಕರೆಸಿ ಮುಂಜಾನೆವರೆಗೂ ಪಾರ್ಟಿ ನಡೆಸಲು ಸಿದ್ಧತೆ ನಡೆಸಿದ್ದನು.
ಆದರೆ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾರೆ. ಅವಧಿ ಮೀರಿ ಪಾರ್ಟಿ ನಡೆದಿದ್ದಲ್ಲದೇ ಪಾರ್ಟಿಯಲ್ಲಿ 45 ಗ್ರಾಂ ಡ್ರಗ್ಸ್, ಎಂಡಿಎಂಎ, ಕೋಕೆನ್ ಸೇರಿ ಹಲವು ಮಾದರಿಯ ಮಾದಕ ವಸ್ತುಗಳು ಪತ್ತೆಯಾಗಿದ್ದು, ಫಾರ್ಮ್ ಹೌಸ್ನ ಇಂಚಿಂಚೂ ಜಾಲಾಡಿದ ಸಿಸಿಬಿ ಟೀಂ ಐವರನ್ನು ಅರೆಸ್ಟ್ ಮಾಡಿದೆ. ರೇವ್ ಪಾರ್ಟಿ ಆಯೋಜನೆ ಮಾಡಿದ್ದ ವಾಸು, ಮೂವರು ಡ್ರಗ್ ಪೆಡ್ಲರ್ಸ್ ಸೇರಿ ಐವರನ್ನು ಬಂಧಿಸಲಾಗಿದೆ. ಇದರೊಂದಿಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದ, ಪ್ರತಿಷ್ಠಿತ ಉದ್ಯಮಿಗಳ ಮಕ್ಕಳು ಸೇರಿ 78 ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು, ಪಾರ್ಟಿಯಲ್ಲಿ ಇದ್ದವರ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಇನ್ನು ಸಿಸಿಬಿ ಅಧಿಕಾರಿಗಳು G.R.ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದಾಗ ಸ್ಥಳದಲ್ಲಿದ್ದ ಐಷಾರಾಮಿ ಕಾರಿನಲ್ಲಿ ಆಂಧ್ರದ ಕೃಷಿ ಸಚಿವರಾಗಿರುವ ಕಾಕನಿ ಗೋವರ್ಧನ ರೆಡ್ಡಿ ಎಂಬವರ ಹೆಸರಿನ ಪಾಸ್ ಕೂಡ ಪತ್ತೆಯಾಗಿದೆ.
ಇದನ್ನೂ ಓದಿ : ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಮನೆ ಮೇಲೆ ದುಷ್ಕರ್ಮಿಗಳಿಂದ ಮೊಟ್ಟೆ ದಾಳಿ..!