ಬೆಂಗಳೂರು : ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಲು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಡೆಡ್ ಲೈನ್ ಮುಗಿದ ಕಾರಣ ಅವರು, ನಿನ್ನೆ ತಡರಾತ್ರಿ ನಗರದ ರಸ್ತೆ ಕಾಮಗಾರಿ ವೀಕ್ಷಣೆ ನಡೆಸಿದ್ದಾರೆ. ಸಿಲಿಕಾನ್ ಸಿಟಿ, ತಂತ್ರಜ್ಞಾನದ ಹಬ್ ಎಂದೆಲ್ಲ ಖ್ಯಾತಿ ಗಳಿಸಿದ ಬೆಂಗಳೂರು ಗುಂಡಿಗಳ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಈ ಬೆನ್ನಲ್ಲೇ ಬೆಂಗಳೂರು ಜಿಲ್ಲಾ ಉಸ್ತುವಾರಿ ಕಮ್ ಡಿಸಿಎಂ ಡಿಕೆ ಶಿವಕುಮಾರ್, ಡೆಡ್ಲಿ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಗೆ 15 ದಿನಗಳ ಗಡುವು ನೀಡಿದ್ದರು.
ಅದರಂತೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಹಗಲು ರಾತ್ರಿ ಎನ್ನದೇ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದರು. ಬಳಿಕ ಫೋಟೋ, ವಿಡಿಯೋ ಸಮೇತ ಡಿಸಿಎಂಗೆ ವರದಿ ನೀಡಿದ್ದರು. ಅಧಿಕಾರಿಗಳ ರಿಪೋರ್ಟ್ನಲ್ಲಿ ಸುಳ್ಳೆಷ್ಟು? ಸತ್ಯವೆಷ್ಟು ಎಂಬುದನ್ನು ಕಣ್ಣಾರೆ ನೋಡಬೇಕೆಂದು ಡಿಕೆ ಶಿವಕುಮಾರ್ ರಾತ್ರಿ ನಗರ ಪ್ರದಕ್ಷಿಣೆ ಹಾಕಿದ್ದಾರೆ.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಿಂದ ಹೊರಟ ಡಿಸಿಎಂ ಡಿಕೆ ಶಿವಕುಮಾರ್, ತಡರಾತ್ರಿ 11.45ರ ವೇಳೆಗೆ ರಸ್ತೆಗುಂಡಿಗಳ ಮುಚ್ಚಿರುವುದರ ಪರಿಶೀಲನೆಗೆ ನೈಟ್ ರೌಂಡ್ಸ್ ಕೈಗೊಂಡರು.
ಮೊದಲಿಗೆ ಜಯಮಹಲ್ ರಸ್ತೆಗೆ ವಿಸಿಟ್ ಕೊಟ್ಟ ಡಿಕೆಶಿ, ಕೈಯಲ್ಲಿ ಹಾರೆ ಹಿಡಿದು ಅಗೆದು, ಕಾಲಲ್ಲಿ ಕೆರೆದು ಕಾಮಗಾರಿ ಪರಿಶೀಲನೆ ನಡೆಸಿದರು. ಬಳಿಕ ಜೊತೆಯಲ್ಲಿ ಬಂದಿದ್ದವರ ಕೈಯಲ್ಲೂ ಹಾರೆಯಿಂದ ಅಗೆಸಿದರು. ಈ ವೇಳೆ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್ಎ.ಹ್ಯಾರಿಸ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು.
ಇನ್ನು ಟ್ರಿನಿಟಿ ಜಂಕ್ಷನ್ ರಸ್ತೆ, ದೊಮ್ಮಲೂರು ಮೇಲ್ಸೇತುವೆ, ಲೋವರ್ ಅಗರಂ ರಸ್ತೆ, ಬನಶಂಕರಿ ಸರ್ಕಲ್, ಪಿಇಎಸ್ ಕಾಲೇಜ್ ಸೇರಿ ಹಲವೆಡೆ ಡಿಸಿಎಂ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಗುಂಡಿ ಪರಿಶೀಲಿಸಿದ ನಂತರ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನನಗೆ ಅಧಿಕಾರಿಗಳ ರಿಪೋರ್ಟ್ ತೃಪ್ತಿ ಕೊಡಲ್ಲ. ಖುದ್ದು ನಾನೇ ವೀಕ್ಷಣೆ ಮಾಡ್ಬೇಕು.. ಹೀಗಾಗಿ ಬಂದಿದ್ದೇನೆ ಎಂದು
ಹೇಳಿದರು.
ಇದನ್ನೂ ಓದಿ : ದರ್ಶನ್ಗೆ ಮತ್ತೊಂದು ಸಂಕಷ್ಟ – ರೇಣುಕಾಸ್ವಾಮಿ ಹತ್ಯೆಗೆ ಬಳಸಿದ್ದ 84 ಲಕ್ಷ ಹಣದ ಮೂಲ ಬೆನ್ನತ್ತಿ ಬಂದ ಐಟಿ..!