ಬೆಂಗಳೂರು : ಮೂಡಾ ಹಗರಣ ಸಂಬಂಧಿಸಿದಂತೆ ಸಿಎಂ ವಿರುದ್ದ ತನಿಖೆಗೆ ನೀಡಿದ ತೀರ್ಪಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹಮದ್ ಖಾನ್ ಬಿಗ್ ಶಾಕ್ ಎದುರಾಗಿದೆ. ಸಚಿವ ಜಮೀರ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಸೂಚನೆ ನೀಡಿದ್ದಾರೆ.
ಮುಡಾ ಕೇಸ್ನಲ್ಲಿ ತಮ್ಮ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಕೊಟ್ಟಿದ್ದ ಅನುಮತಿಯನ್ನು ಪ್ರಶ್ನಿಸಿ, ಸಿಎಂ ಸಿದ್ದರಾಮಯ್ಯನವರು ಹೈಕೋರ್ಟ್ ಮೊರೆ ಹೋಗಿದ್ದರು. ಸಿದ್ದರಾಮಯ್ಯನವರ ಅರ್ಜಿಯನ್ನು ತಳ್ಳಿಹಾಕಿದ ಹೈಕೋರ್ಟ್, ರಾಜ್ಯಪಾಲರ ನಡೆ ಸರಿಯಾಗಿದೆ ಎಂದು ಹೇಳಿತ್ತು. ಆ ಮೂಲಕ, ಜನಪ್ರತಿನಿಧಿ ನ್ಯಾಯಾಲಯದಲ್ಲಿ ವಿಚಾರಣೆಗೆ ನೀಡಲಾಗಿದ್ದ ಈ ಪ್ರಕರಣದ ವಿಚಾರಣೆಯ ತಡೆಯೂ ತೆರವುಗೊಂಡಿತು.
ಸೆ. 25ರಂದು, ತೀರ್ಪು ನೀಡಿದ ಜನಪ್ರತಿನಿಧಿ ನ್ಯಾಯಾಲಯ ಸಿದ್ದರಾಮಯ್ಯನವರ ವಿರುದ್ಧ ತನಿಖೆ ನಡೆಸುವಂತೆ ಹಾಗೂ ಎಫ್ಐಆರ್ ದಾಖಲಿಸುವಂತೆ ಮೈಸೂರು ಲೋಕಾಯುಕ್ತ ಎಸ್ಪಿಗೆ ಸೂಚನೆ ನೀಡಿತು.
ಈ ತೀರ್ಪಿನ ವಿರುದ್ಧ ಟೀಕೆ ಮಾಡಿದ್ದ ಜಮೀರ್ ಅಹ್ಮದ್, ನ್ಯಾಯಾಲಯದ ತೀರ್ಪು ರಾಜಕೀಯ ಪ್ರೇರಿತವಾಗಿದ್ದು, ಅದೊಂದು ರಾಜಕೀಯ ತೀರ್ಪು ಎಂದು ಹೇಳಿದ್ದರು. ಆ ಹಿನ್ನೆಲೆಯಲ್ಲಿ ಮುಡಾ ದೂರುದಾರರಲ್ಲೊಬ್ಬರಾದ ಟಿ.ಜೆ. ಅಬ್ರಹಾಂ ಅವರು ಜಮೀರ್ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಜೊತೆಗೆ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಕ್ರಿಮಿನಲ್ ಪ್ರೊಸಿಡಿಂಗ್ ಗೆ ರಾಜ್ಯಪಾಲರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯಪಾಲರು ಸಚಿವ ಜಮೀರ್ ಅಹ್ಮದ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅಡ್ವೋಕೇಟ್ ಜನರಲ್ಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ : ಅಭಿನಯ ಚಕ್ರವರ್ತಿ ಎದುರೇ ‘ಕೆಂಪೇಗೌಡ’ ಡೈಲಾಗ್ ಹೊಡೆದ ಚೈತ್ರಾ ಕುಂದಾಪುರ.. ಸುದೀಪ್ ರಿಯಾಕ್ಷನ್ ಹೇಗಿತ್ತು?