ಕೇರಳ : ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವದ್ರಾ ಮೊಟ್ಟಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಅವರ ಸಹೋದರ ರಾಹುಲ್ ಗಾಂಧಿಯವರು ರಾಯಬರೇಲಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆಯುತ್ತಿದೆ.
ಇದೀಗ ರಾಹುಲ್ ಗಾಂಧಿಯವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಸ್ಥಾನದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಯುಡಿಎಫ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಬಿಜೆಪಿಯಿಂದ ನವ್ಯಾ ಹರಿದಾಸ್ ಮತ್ತು ಎಡ ಮೈತ್ರಿಕೂಟದ ಎಲ್‌ಡಿಎಫ್‌ನಿಂದ ಸತ್ಯನ್ ಮೊಕೇರಿ ಸ್ಪರ್ಧಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಂಸದೀಯ ರಾಜಕೀಯಕ್ಕೆ ಬರುವ ಕನಸು ನನಸಾಗುತ್ತದೆಯೋ ಇಲ್ಲವೋ ಎಂಬುದನ್ನು ವಯನಾಡಿನ ಮತದಾರರು ಇಂದು ನಿರ್ಧರಿಸಲಿದ್ದಾರೆ.
ರಾಹುಲ್ ಗಾಂಧಿ ವಯನಾಡ್ ಕ್ಷೇತ್ರವನ್ನು ತೊರೆದಿರುವುದರಿಂದ ಇಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಸುಮಾರು 14 ಲಕ್ಷ ಮತದಾರರು 16 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
2019ರಲ್ಲಿ ರಾಹುಲ್ ಗಾಂಧಿ ವಯನಾಡಿನಿಂದಲೇ ಸಂಸತ್ತನ್ನು ತಲುಪಿದ್ದರು. 2024ರಲ್ಲಿ ರಾಹುಲ್ ವಯನಾಡ್ ಮತ್ತು ರಾಯ್ಬರೇಲಿ ಎರಡನ್ನೂ ಗೆದ್ದರು. ಇದರ ನಂತರ ಅವರು ವಯನಾಡ್‌ಗೆ ರಾಜೀನಾಮೆ ನೀಡಿದರು. ಈಗ ಉಪಚುನಾವಣೆಯಲ್ಲಿಯೂ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಬಯಸಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವದ್ರಾ ಅವರನ್ನು ಕಣಕ್ಕಿಳಿಸಿದೆ.
ಇದನ್ನೂ ಓದಿ : ಬೊಂಬೆಯೂರು ಚನ್ನಪಟ್ಟಣದಲ್ಲಿ ಮತದಾನದ ರಂಗು.. ನಿಖಿಲ್-ಯೋಗೇಶ್ವರ್ ಮಧ್ಯೆ ಬಿಗ್ ಫೈಟ್..!