ಬೆಂಗಳೂರು : ನಗರದ ಸೌಂದರ್ಯ ಹೆಚ್ಚಿಸೋ ಜೊತೆಗೆ ಗ್ರೀನ್ ಬೆಂಗಳೂರು ಮಾಡೋಕೆ ಹೊರಟಿರೋ ಬಿಬಿಎಂಪಿ, ಗ್ರೀನ್ ಬೆಂಗಳೂರು ಯೋಜನೆ ಅಡಿಯಲ್ಲಿ ಐಟಿ ಸಿಟಿ ಸುತ್ತಮುತ್ತ 90 ಸಾವಿರ ಗಿಡಗಳನ್ನು ಬೆಳೆಸೋಕೆ ಮುಂದಾಗಿದೆ.
ಇದೀಗ ಗಿಡಗಳನ್ನು ಬೆಳೆಸೋ ಪರಿಯಲ್ಲಿ ಪಾಲಿಕೆ ಎಡವಟ್ಟು ಮಾಡಿಕೊಂಡಿದ್ದು, ರಸ್ತೆಬದಿ ಗಿಡಗಳನ್ನ ನೆಟ್ಟು ಪೋಷಿಸ್ತಿರೋ ಪಾಲಿಕೆ, ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಮಾರಕವಾಗುವ ಕೋನೋ ಕಾರ್ಪಸ್ ಅನ್ನೋ ಗಿಡಗಳನ್ನ ರಸ್ತೆಬದಿ ನೆಟ್ಟಿದೆ. ಈಗಾಗಲೇ ಪಾಲಿಕೆ ಕೆಂಗೇರಿ, ಯಲಹಂಕ ರಸ್ತೆಯುದ್ಧಕ್ಕೂ ಈ ಸಸ್ಯಗಳನ್ನು ಬೆಳಿಸಿದ್ದು, ಇದರಿಂದ ಪರಿಸರಕ್ಕೆ ಸಂಕಷ್ಟ ಎದುರಾಗುವ ಲಕ್ಷಣಗಳು ಎದ್ದುಕಾಣ್ತಿವೆ.
ಈ ಸಸ್ಯ ಪ್ರಭೇದವನ್ನ ಈಗಾಗಲೇ ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಗುಜರಾತ್, ತೆಲಂಗಾಣದಲ್ಲೂ ಈ ಗಿಡಕ್ಕೆ ನಿಷೇಧವಿದೆ. ದುಬೈ ಗಿಡ ಅಂತಲೂ ಕರೆಯಲ್ಪಡೋ ಈ ಸಸ್ಯ, ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗುವುದಲ್ಲದೇ, ಮನುಷ್ಯರಿಗೆ ಉಸಿರಾಟದ ಸಮಸ್ಯೆಗಳನ್ನ ತಂದಿಡುತ್ತೆ ಹಾಗೂ ಪರಿಸರಕ್ಕೂ ಮಾರಕ ಎಂಬ ಸ್ಫೋಟಕ ಅಂಶ ವರದಿಗಳಲ್ಲಿ ಬಹಿರಂಗವಾಗಿದೆ.
ಕಡಿಮೆ ನೀರಿನಲ್ಲೇ ಹಚ್ಚ ಹಸಿರಾಗಿ ಕಂಗೊಳಿಸೋ ಈ ಗಿಡ, ನಿರ್ವಹಣೆ ಕೂಡ ಸುಲಭ ಇರೋದ್ರಿಂದ ಪಾಲಿಕೆ, ಅರಣ್ಯ ಇಲಾಖೆ ನರ್ಸರಿಗಳಲ್ಲೂ ಕೂಡ ಸ್ಟಾಕ್ ಇಟ್ಟು ನಾಟಿ ಮಾಡ್ತಿದೆ. ಗಾಳಿಯಲ್ಲಿ ಬೀಜಗಳು ಹರಡಿದ್ರೂ ಕೂಡ ಈ ಗಿಡ ವೇಗವಾಗಿ ಬೆಳೆಯೋ ಶಕ್ತಿ ಹೊಂದಿದ್ದು, ಆದಷ್ಟು ಬೇಗ ಗಿಡಗಳನ್ನ ತೆರವು ಮಾಡಿ ಎಂದು ಪರಿಸರ ಪ್ರೇಮಿಗಳು ಎಚ್ಚರಿಸುತ್ತಿದ್ದಾರೆ. ಈಗಾಗಲೇ ಹಲವೆಡೆ ನೆಟ್ಟಿರೊ ಈ ಡೇಂಜರಸ್ ದುಬೈ ಗಿಡಗಳ ತೆರವಿಗೆ ಪಾಲಿಕೆ ಇನ್ನಾದ್ರೂ ಕ್ರಮವಹಿಸುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ : ಇಂದು ಸಿಎಂ ಸಿದ್ದು, ಡಿಸಿಎಂ ಡಿಕೆಶಿಯನ್ನ ಭೇಟಿಯಾಗಲಿರುವ ‘ಕೈ’ ಶಾಸಕರ ನಿಯೋಗ..!