ಬಜೆಟ್​​ನಲ್ಲಿ ಬೆಂಗಳೂರಿಗೆ ಬಂಪರ್ – 7 ಹೈಸ್ಪೀಡ್ ರೈಲ್ವೆ ಕಾರಿಡಾರ್ ಘೋಷಿಸಿದ ನಿರ್ಮಲಾ ಸೀತಾರಾಮನ್!

ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಂಪರ್‌ ಕೊಡುಗೆ ಕೊಟ್ಟಿದ್ದಾರೆ. ಚೆನ್ನೈ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ಏಳು ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿರುವುದಾಗಿ ಘೋಷಣೆ ಮಾಡಿದ್ದಾರೆ.

ಈ ಯೋಜನೆಯಡಿ ಮುಂಬೈ–ಪುಣೆ, ಪುಣೆ–ಹೈದರಾಬಾದ್, ಹೈದರಾಬಾದ್–ಬೆಂಗಳೂರು, ಹೈದರಾಬಾದ್–ಚೆನ್ನೈ, ಚೆನ್ನೈ–ಬೆಂಗಳೂರು, ದೆಹಲಿ–ವಾರಾಣಸಿ ಹಾಗೂ ವಾರಾಣಸಿ–ಸಿಲಿಗುರಿ ನಡುವೆ ಹೈಸ್ಪೀಡ್ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗಳ ಮೂಲಕ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದು, ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವುದು ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಯೋಜನೆಯಿಂದ ಮಹಾನಗರಗಳು ಮತ್ತು ಪ್ರಮುಖ ಆರ್ಥಿಕ ಕೇಂದ್ರಗಳ ನಡುವೆ ಸಂಪರ್ಕ ಮತ್ತಷ್ಟು ಬಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ರೈಲುಗಳು ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಅಸ್ತಿತ್ವದಲ್ಲಿರುವ ಕಾರಿಡಾರ್‌ಗಳನ್ನು ಹೈ-ಸ್ಪೀಡ್ ಕಾರಿಡಾರ್‌ಗಳಾಗಿ ಪರಿವರ್ತಿಸುವ ಯೋಜನೆಗಳನ್ನೂ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
Btv Kannada
Author: Btv Kannada

Read More