ಹಾಸನ : ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಕಾಲೇಜಿನ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದ ಉದಯಗಿರಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನ 18 ವರ್ಷದ ವಿಕಾಸ್ ಎಂದು ಗುರುತಿಸಲಾಗಿದೆ.
ಹಾಸನ ನಗರದ ಉದಯಗಿರಿಯ ಮಾಸ್ಟರ್ ಪಿಯು ಕಾಲೇಜಿನಲ್ಲಿ ವಿಕಾಸ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ. ವಿಕಾಸ್, ಚನ್ನರಾಯಪಟ್ಟಣ ತಾಲ್ಲೂಕು ಬೆಳಗುಲಿ ಗ್ರಾಮದ ಸುರೇಶ್, ಮಮತಾ ದಂಪತಿಗೆ ಒಬ್ಬನೇ ಮಗ. ವಿಕಾಸ್ ಇಂದು ಕಾಲೇಜಿಗೆ ತೆರಳಿ ನಂತರ ಒಬ್ಬನೇ ಹಾಸ್ಟೆಲ್‌ಗೆ ಬಂದಿದ್ದ. ಇದಾದ ಮೇಲೆ ಕಾಲೇಜಿನ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಸ್ಟೆಲ್ ವಾರ್ಡ್‌ನ್ ಕಿರುಕುಳಕ್ಕೆ ಬೇಸತ್ತು ವಿಕಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೀಗಾಗಿ ವಿದ್ಯಾರ್ಥಿ ಸಾವಿಗೆ ಪೋಷಕರು ಹಾಗೂ ಸಂಬಂಧಕರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಸ್ಟೆಲ್ ವಾರ್ಡ್‌ನ್ ಹಾಗೂ ಶಾಲಾ ಆಡಳಿತ ಮಂಡಳಿಯವರು ಬರುವಂತೆ ಪಟ್ಟು ಹಿಡಿದಿದ್ದು,
ಅಲ್ಲಿಯವರೆಗೂ ಶವ ಮೇಲೆತ್ತಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಕಾಲೇಜು ಹಾಸ್ಟೆಲ್ ಬಳಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ : ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು..!