ಬೆಂಗಳೂರು : ಮೂರು ದಿನಗಳ ಕಾಲ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಡುವೆ ನಮ್ಮ ಮೆಟ್ರೋ ರೈಲು ಸೇವೆ ಲಭ್ಯವಿರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮಾಹಿತ ನೀಡಿದೆ.
ನಾಗಸಂದ್ರ ಮತ್ತು ಮಾದಾವರ ನಡುವೆ ಮಾರ್ಗ ವಿಸ್ತರಣೆಗೆ ಸಂಬಂಧಿಸಿದ ವಿದ್ಯುತ್ ಕಾಮಗಾರಿಗಳಿಗೆ ಅನುಕೂಲವಾಗುವಂತೆ ಜನವರಿ 26, 27 ಮತ್ತು 28 ರಂದು ಸಿಲ್ಕ್ ಇನ್‌ಸ್ಟಿಟ್ಯೂಟ್ ಮತ್ತು ಪೀಣ್ಯ ಇಂಡಸ್ಟ್ರಿ ನಡುವೆ ಮಾತ್ರ ಹಸಿರು ಮಾರ್ಗದ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಡುವಿನ ರೈಲು ಸಂಚಾರ ಜನವರಿ 29 ರಂದು ಬೆಳಿಗ್ಗೆ 5 ಗಂಟೆಗೆ ಮತ್ತೆ ಆರಂಭವಾಗಲಿದೆ ಎಂದು ಹೇಳಿದೆ. ಜಾಲಹಳ್ಳಿ, ದಾಸರಹಳ್ಳಿ ಮತ್ತು ನಾಗಸಂದ್ರ ನಿಲ್ದಾಣಗಳಿಂದ/ನಿಲ್ದಾಣಗಳಿಗೆ ತೆರಳುವ ಪ್ರಯಾಣಿಕರಿಗೆ ಮೂರು ದಿನ ತೊಂದರೆಯಾಗಲಿದೆ.
ನೇರಳೆ ಮಾರ್ಗವಾದ ಚಲ್ಲಘಟ್ಟದಿಂದ ವೈಟ್‌ಫೀಲ್ಡ್ (ಕಾಡುಗೋಡಿ) ವರೆಗೆ ರೈಲು ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಂದಿನಂತೆ ಈ ಮಾರ್ಗದಲ್ಲಿ ರೈಲುಗಳು ಚಲಿಸಲಿವೆ. ಜನವರಿ 26ರಿಂದ 29ರವರೆಗೆ ಮೂರು ದಿನ ಪೀಣ್ಯ ಇಂಡಸ್ಟ್ರಿ ಮತ್ತು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಜನ ಸಂದಣಿ ಉಂಟಾಗುವ ಸಾಧ್ಯತೆ ಇದ್ದು, ಪ್ರಯಾಣಿಕರು ವಿಳಂಬವಾಗುವುದನ್ನು ತಪ್ಪಿಸಲು ವಾಟ್ಸಾಪ್ ಅಥವಾ ನಮ್ಮ ಮೆಟ್ರೋ ಅಪ್ಲಿಕೇಶನ್ ಮೂಲಕ ಕ್ಯೂಆರ್ ಟಿಕೆಟ್ ಖರೀದಿಸುವಂತೆ ಮನವಿ ಮಾಡಿದೆ.
ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿಯನ್ನು ನಿರೀಕ್ಷಿಸಿ, ಬಿಎಂಆರ್‌ಸಿಎಲ್ ಇನ್ನೂ ಆರು ಟಿಕೆಟ್ ಕೌಂಟರ್‌ಗಳು, ಇನ್ನೂ ಐದು ಎಎಫ್‌ಸಿ (ಸ್ವಯಂಚಾಲಿತ ಶುಲ್ಕ ಸಂಗ್ರಹ) ಗೇಟ್‌ಗಳು ಮತ್ತು ಇಲ್ಲಿಯವರೆಗೆ ಮುಚ್ಚಲಾದ ಮತ್ತೊಂದು ಪ್ರವೇಶದ್ವಾರವನ್ನು ತೆರೆಯಲಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿ ಹೇಳಿರುವುದಾಗಿ ಡಿಹೆಚ್ ವರದಿ ಮಾಡಿದೆ.
ಇದನ್ನೂ ಓದಿ : ದೆಹಲಿಯಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ : ಕರ್ತವ್ಯ ಪಥದಲ್ಲಿ ನಾರಿ ಶಕ್ತಿ ಅನಾವರಣ..!