ರಾಮನಗರ : ರಾಜ್ಯದಲ್ಲಿ ಉಪಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿದ್ದು, ರಾಜಕೀಯ ಘಟಾನುಘಟಿ ನಾಯಕರುಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅದರಲ್ಲೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ರಣರಂಗವಾಗಿದ್ದು, NDA ಹಾಗೂ ಆಡಳಿತಾರೂಢ ಕಾಂಗ್ರೆಸ್ ನಡುವಣ ವಾಕ್ಸಮರ ದಿನದಿಂದ ದಿನಕ್ಕೆ ಜೋರಾಗುತ್ತಿದೆ.
ಈ ಮಧ್ಯೆ ಇಂದು ಕೂಡ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ದೇವೇಗೌಡರು ಅಖಾಡಕ್ಕೆ ಧುಮುಕಲಿದ್ದಾರೆ. ದೇವೇಗೌಡರು ಈಗಾಗಲೇ ಚನ್ನಪಟ್ಟಣ ಟೌನ್ನಲ್ಲಿ ಮತಬೇಟೆ ನಡೆಸಿದ್ದು, ಇಂದು ಬೆಳಗ್ಗೆ 11.30 ಕ್ಕೆ ರಾಂಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಆ ಬಳಿಕ ಮುನಿಯಪ್ಪನದೊಡ್ಡಿ, ನೀಲಸಂದ್ರ, ಹೊಂಗನೂರಲ್ಲಿ ಮತಬೇಟೆ ನಡೆಸಲಿದ್ದು, ಹೆಚ್.ಡಿ ಕುಮಾರಸ್ವಾಮಿ ಸೇರಿ ಹಲವು ಮುಖಂಡರು ದೇವೇಗೌಡರಿಗೆ ಸಾಥ್ ನೀಡಲಿದ್ದಾರೆ.
ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ಈ ವರೆಗೂ ತಂದೆ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಬಿಜೆಪಿಯ ಒಂದಷ್ಟು ನಾಯಕರು ಪ್ರಚಾರ ನಡೆಸುತ್ತಿದ್ದರು. ಮಂಗಳವಾರವಷ್ಟೆ ತಮ್ಮ ಮೊಮ್ಮೊಗ ನಿಖಿಲ್ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಂಗ ಪ್ರವೇಶ ಮಾಡಿದ್ದರು. ಇದರ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಪ್ರಚಾರ ಕಣಕ್ಕಿಳಿದಿದ್ದಾರೆ. ಹೀಗಾಗಿ ಬುಧವಾರ ಕೇಂದ್ರ ಸಚಿವ ಕುಮಾರಸ್ವಾಮಿ, ವಿ.ಸೋಮಣ್ಣ, ಬಿ.ವೈ.ವಿಜಯೇಂದ್ರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ ಹೀಗೆ ಘಟಾನುಘಟಿ ನಾಯಕರುಗಳೆಲ್ಲರೂ ಒಂದೇ ದಿನ ಎರಡ್ಮೂರು ಕಡೆಗಳಲ್ಲಿಅಬ್ಬರದ ಪ್ರಚಾರ ನಡೆಸಿದ್ದಾರೆ.
ಇದನ್ನೂ ಓದಿ : ಬೈ ಎಲೆಕ್ಷನ್ ಭರಾಟೆ : ಸಂಡೂರಿನಲ್ಲಿ ಅನ್ನಪೂರ್ಣ ಪರ ಇಂದು ಸಿಎಂ ಸಿದ್ದರಾಮಯ್ಯ ಮತಬೇಟೆ..!