ನವದೆಹಲಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್, ಭೂಪೇಂದ್ರ ಯಾದವ್ ಸಮಕ್ಷಮದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿರುವ ಜಗದೀಶ್ ಶೆಟ್ಟರ್ ಅವರು ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದಾರೆ. ದೆಹಲಿಯಿಂದಲೇ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ಕರೆ ಮಾಡಿರುವ ಶೆಟ್ಟರ್ ಅವರು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಾಹಿತಿ ನೀಡಿದ್ದಾರೆ.
ಇ-ಮೇಲ್ ಮೂಲಕ ಬೇಡ ನೇರವಾಗಿ ಬಂದು ರಾಜೀನಾಮೆ ನೀಡುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸೂಚಿಸಿದ್ದಾರೆ. ದೆಹಲಿಯಿಂದ ಖುದ್ದಾಗಿ ಬಂದು ಶೆಟ್ಟರ್ ಅವರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತೇನೆ : ಶೆಟ್ಟರ್
ಪಕ್ಷ ಸೇರ್ಪಡೆ ನಂತರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಶೆಟ್ಟರ್, ನಾನು ಪಕ್ಷಕ್ಕೆ ವಾಪಸಾಗಬೇಕೆಂದು ನಾಯಕರ ಅಪೇಕ್ಷೆ ಇತ್ತು. ಅಮಿತ್ ಶಾ ಅವರು ಅತ್ಯಂತ ಗೌರವದಿಂದ ಬರಮಾಡಿಕೊಂಡರು. ನಾನು ಬಿಜೆಪಿ ಮರು ಸೇರ್ಪಡೆಯಾಗಿದ್ದಕ್ಕೆ ಬಹಳ ಸಂತಸ ಆಗಿದೆ. ನಾನು ಪರಿಷತ್ ಸ್ಥಾನಕ್ಕೆ ರಾಜೀನಾಮೆಯನ್ನೂ ಸಲ್ಲಿಸಿದ್ದೇನೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೇನೆ.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕು. ನಾನು ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ನವರು ಕೂಡ ಒಳ್ಳೇ ಗೌರವ, ಸ್ಥಾನಮಾನ ನೀಡಿದ್ದರು. ಕಾಂಗ್ರೆಸ್ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಇದನ್ನೂ ಓದಿ : 83 ಲಕ್ಷ ರೂ. ಪಡೆದು ಕಳಪೆ ದರ್ಜೆಯ ಡ್ರೋನ್ ಮಾರಾಟ – ಡ್ರೋನ್ ಪ್ರತಾಪ್ ಮೇಲೆ ಮತ್ತೊಂದು ಗಂಭೀರ ಆರೋಪ..!