ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
ಬಘೀರನಾಗಿ ಶ್ರೀ ಮುರಳಿ ರಗಡ್ ಪೊಲೀಸ್ ಅವತಾರದಲ್ಲಿ ಮಿಂಚಿದ್ದಾರೆ. ಆ ಖಾಕಿ ಗತ್ತು, ಕಡಿಮೆ ಮಾತು ಅವರ ಪ್ರಭಾವಳಿಯನ್ನ ಹೆಚ್ಚಿಸಿದೆ. ಪ್ರಕಾಶ್ ರಾಜ್, ಅವಿನಾಶ್, ರಾಣಾ ಪಾತ್ರವೂ ಮೈ ನಡುಗಿಸುತ್ತದೆ.
ಬಘೀರ ಸಿನಿಮಾದಲ್ಲಿ ಸೂಪರ್ ಹೀರೋ ಕಥೆ ಇದೆ. ಜನರೆಲ್ಲ ಕಷ್ಟದಲ್ಲಿ ಇದ್ದಾಗ ಅವರನ್ನು ಕಾಪಾಡಲು ಬರುವ ಆಪದ್ಭಾಂದವನ ರೀತಿ ಇದೆ ‘ಬಘೀರ’ ಸಿನಿಮಾದ ಕಥಾನಾಯಕನ ಪಾತ್ರ. ಹಾಗಂತ ಈ ಪಾತ್ರ ಸ್ಪೈಡರ್ ಮ್ಯಾನ್ ರೀತಿ ವಿಶೇಷ ಶಕ್ತಿಯುಳ್ಳ ಸೂಪರ್ ಹೀರೋ ಅಲ್ಲ. ಬದಲಿಗೆ, ಬ್ಯಾಟ್ಮ್ಯಾನ್ ರೀತಿ ಕೆಲವು ಸಾಧನಗಳನ್ನು ಬಳಸಿಕೊಂಡು ಜನರನ್ನು ಕಾಪಾಡುವ ಸೂಪರ್ ಹೀರೋ. ಈತ ಜನರ ನಡುವೆ ಇರುವ ವ್ಯಕ್ತಿ. ಆತನಿಗೆ ಶಕ್ತಿಗಿಂತಲೂ ಜಾಸ್ತಿ ಇತಿ-ಮಿತಿಗಳು ಇರುತ್ತವೆ. ಅಂತಹ ಪಾತ್ರವನ್ನು ಇಟ್ಟುಕೊಂಡು ಸೂಪರ್ ಹೀರೋ ಕಥೆ ಹೆಣೆಯುವುದು ಸವಾಲಿನ ಕೆಲಸ. ಅದನ್ನು ಪ್ರಶಾಂತ್ ನೀಲ್ ಮಾಡಿದ್ದಾರೆ.
ಶ್ರೀಮುರಳಿ ಅವರು ತಮ್ಮ ಮ್ಯಾನರಿಸಂ ಅನ್ನು ಸಂಪೂರ್ಣ ಬಿಟ್ಟುಕೊಟ್ಟಿಲ್ಲ. ಅದನ್ನು ಜೊತೆಯಲ್ಲಿ ಇಟ್ಟುಕೊಂಡೇ ಸ್ವಲ್ಪ ಹೊಸದಾಗಿ ಜನರನ್ನು ರಂಜಿಸಲು ಪ್ರಯತ್ನಿಸಿದ್ದಾರೆ. ಅನಗತ್ಯವಾದ ಬಿಲ್ಡಪ್ಗಳಿಗೆ ಈ ಸಿನಿಮಾದಲ್ಲಿ ಜಾಗವಿಲ್ಲ. ಅದರ ಬದಲು ನೇರವಾಗಿ ಕಥೆ ಹೇಳಲು ನಿರ್ದೇಶಕರು ಹೆಚ್ಚು ಒತ್ತು ನೀಡಿದ್ದಾರೆ. ಯಾವುದೇ ಉದ್ದುದ್ದ ಡೈಲಾಗ್ಗಳ ಬದಲು ಆ್ಯಕ್ಷನ್ ಮೂಲಕವೇ ಶ್ರೀಮುರಳಿ ಅವರು ವಿಲನ್ಗಳಿಗೆ ಉತ್ತರ ನೀಡುತ್ತಾರೆ. ಸ್ವಲ್ಪ ಸಮಯ ಪೊಲೀಸ್ ಅಧಿಕಾರಿಯಾಗಿ, ಇನ್ನುಳಿದ ಸಮಯ ಸೂಪರ್ ಹೀರೋ ಆಗಿ ಅವರು ಮನರಂಜನೆ ನೀಡುತ್ತಾರೆ.
ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಸೆಕೆಂಡ್ ಹಾಫ್ನಲ್ಲಿ ಸ್ವಲ್ಪ ಮಹತ್ವ ಸಿಕ್ಕಿದೆ. ತಮಗೆ ಸಿಕ್ಕಷ್ಟು ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಗರುಡ ರಾಮ್ ಅವರು ಈ ಸಿನಿಮಾದ ಮುಖ್ಯ ವಿಲನ್. ಸೂಪರ್ ಹೀರೋಗೆ ಎದುರಾಗಿ ನಿಲ್ಲುವ ರಾಕ್ಷಸನಾಗಿ ಅವರು ಅಬ್ಬರಿಸಿದ್ದಾರೆ. ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾರಾಣಿ ಅವರಂತಹ ಹಿರಿಯ ಕಲಾವಿದರಿಂದಾಗಿ ಸಿನಿಮಾದ ತೂಕ ಹೆಚ್ಚಿದೆ.
ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಬಘೀರ ಸಿನಿಮಾಕ್ಕೆ, ನವೀನ್ ಕುಮಾರ್ ಛಾಯಾಗ್ರಹಣವಿದೆ. ಪ್ರಶಾಂತ್ ನೀಲ್ ಶಕ್ತಿಶಾಲಿ ಕಥೆ ಬರೆದಿದ್ದಾರೆ. ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಬಘೀರ ಚಿತ್ರದಲ್ಲಿ ಪೊಲೀಸ್ ಅವತಾರದಲ್ಲಿ ಶ್ರೀಮುರಳಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದರೆ, ಇನ್ನುಳಿದಂತೆ ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಸೇರಿ ಇನ್ನೂ ಹತ್ತಾರು ಕಲಾವಿದರು ನಟಿಸಿದ್ದಾರೆ.
ಇದನ್ನೂ ಓದಿ : ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಪ್ರಶ್ನೆ ಇಲ್ಲವೇ ಇಲ್ಲ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ..!