ಅಯೋಧ್ಯೆಯಲ್ಲಿ 8ನೇ ದೀಪೋತ್ಸವಕ್ಕೆ ಸಜ್ಜಾಗಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಉತ್ತರ ಪ್ರದೇಶ ಸಿದ್ಧತೆ ಕೈಗೊಂಡಿದೆ. ಭವ್ಯ ರಾಮ ಮಂದಿರ ತಲೆಯತ್ತಿದ ನಂತರ ಮೊದಲ ದೀಪಾವಳಿ ಇದಾಗಿದ್ದು, ಲಕ್ಷ ದೀಪೋತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗುವ ನಿರೀಕ್ಷೆ ಇದೆ.
ಸರಯೂ ನದಿ ತಟದಲ್ಲಿ 28 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಹೊಸ ಗಿನ್ನೆಸ್ ವಿಶ್ವದಾಖಲೆ ಹೊಂದುವ ಗುರಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಹೊಂದಿದೆ. ರಾಮ ಮಂದಿರವು ದೀಪದ ಬೆಳಕಿನಲ್ಲಿ ಕಂಗೊಳಿಸಲಿದೆ. ಲೇಸರ್, ಧ್ವನಿ ಮತ್ತು ಡ್ರೋನ್ ಶೋ ಕೂಡ ನಡೆಯಲಿದೆ. ಇಡೀ ನಗರವು ವಿದ್ಯುತ್ ದೀಪಗಳಿಂದ ಝಗಮಗಿಸಲಿದೆ. ಗಿನ್ನೆಸ್ ವಿಶ್ವ ದಾಖಲೆಗಳ ಸಲಹೆಗಾರ ನಿಶ್ಚಲ್ ಬರೋಟ್ ನೇತೃತ್ವದ 30 ಜನರ ತಂಡ ಈಗಾಗಲೇ 55 ಘಾಟ್ಗಳಲ್ಲಿ ಡ್ರೋನ್ಗಳನ್ನು ಬಳಸಿಕೊಂಡು ದಿಯಾಗಳನ್ನು ಎಣಿಸಲು ಪ್ರಾರಂಭಿಸಿದೆ.
ಮ್ಯಾನ್ಮಾರ್, ನೇಪಾಳ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ, ಇಂಡೋನೇಷ್ಯಾದ ಕಲಾವಿದರಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ದೇಶಗಳಲ್ಲಿರುವ ರಾಮಾಯಣಗಳ ಪ್ರಸ್ತುತಿ ನಡೆಯಲಿದೆ. ಉತ್ತರಾಖಂಡದ ರಾಮಲೀಲಾ ಪ್ರದರ್ಶನವೂ ಇರಲಿದೆ.
ಸ್ಥಳೀಯ ಕುಶಲಕರ್ಮಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಬಾರಿಯ ದೀಪಾವಳಿಗೆ ಚೀನಾ ತಯಾರಿತ ದೀಪಗಳ ಹಾಗೂ ಅಲಂಕಾರಿಕ ವಸ್ತುಗಳನ್ನು ಬಳಸದಿರಲು ನಿರ್ಧರಿಸಿದೆ.
ಇದನ್ನೂ ಓದಿ : ಹಾಕಿ ಕ್ರೀಡಾಕೂಟದಲ್ಲಿ ಪರ್ಜನ್ಯ ಮತ್ತು ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ..!