ಭಾರತದ ಕ್ರಿಕೆಟ್ ಹಬ್ಬ, ಬಹುನಿರೀಕ್ಷಿತ 2025ರ ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಇದೀಗ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ನಡೆಯಲಿರುವ ಮೆಗಾ ಹರಾಜಿಗೆ ಡೇಟ್ ನಿಗದಿಯಾಗಿದ್ದು, ಮುಂಬರುವ ನವೆಂಬರ್ 24, 25ರಂದು ಆಟಗಾರರ ಹರಾಜು ನಡೆಯಲಿದೆ ಎಂದು ವರದಿಯಾಗಿದೆ. ಕಳೆದ ಬಾರಿ ಐಪಿಎಲ್ ಆಟಗಾರರ ಹರಾಜಿಗೆ ದುಬೈ ವೇದಿಕೆಯಾಗಿತ್ತು. ಅದರಂತೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೆ ಸೌದಿ ಅರೇಬಿಯಾದ ರಿಯಾದ್ ನಗರ ಆತಿಥ್ಯ ವಹಿಸಲಿದೆ ಎನ್ನಲಾಗುತ್ತಿದೆ.
ಈ ಹಿಂದೆ ಸಿಂಗಾಪುರ್, ದುಬೈ ಅಥವಾ ಲಂಡನ್ನಲ್ಲಿ ಮೆಗಾ ಆಕ್ಷನ್ ನಡೆಯಲಿದೆ ಎಂದು ವರದಿಯಾಗಿತ್ತು. ಆದರೀಗ ಸೌದಿ ಅರೇಬಿಯಾದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ 600ಕ್ಕೂ ಅಧಿಕ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಆಟಗಾರರ ಹೆಸರು ನೋಂದಣಿ ನಡೆಯಲಿದ್ದು, ಇದಾದ ಬಳಿಕ ಆಟಗಾರರ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಹೀಗೆ ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದ ಆಟಗಾರರ ಹೆಸರು ಮಾತ್ರ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.
ಈಗಾಗಲೇ 2025-2027ರ ಆವೃತ್ತಿಗಳಿಗೆ ಹೊಸ ನಿಯಮ ಜಾರಿಗೊಳಿಸಿರುವ ಬಿಸಿಸಿಐ, ಇದೇ ಅಕ್ಟೋಬರ್ 31ರ ಸಂಜೆ 5 ಗಂಟೆಯ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್ ಆಟಗಾರರ ಪಟ್ಟಿಯನ್ನು ಸಲ್ಲಿಕೆ ಮಾಡುವಂತೆ ಸೂಚಿಸಿದೆ. ಇನ್ನು IPL ಫ್ರಾಂಚೈಸಿಗಳು ಭಾರತದಲ್ಲಿಯೇ ಹರಾಜು ಪ್ರಕ್ರಿಯೆ ಆಯೋಜಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದವು. ಆದರೆ ಬಿಸಿಸಿಐ ಈ ಆಯ್ಕೆಯನ್ನು ತಳ್ಳಿಹಾಕಿತು. ಹೀಗಾಗಿ ಸೂಕ್ತ ಪ್ರಯಾಣದ ವ್ಯವಸ್ಥೆ ಮಾಡಲು ಮೆಗಾ ಹರಾಜಿನ ಸ್ಥಳ ಮತ್ತು ದಿನಾಂಕಗಳ ಕುರಿತು ಫ್ರಾಂಚೈಸಿಗಳು ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿವೆ.
ಇದನ್ನೂ ಓದಿ : ಟಾಸ್ಕ್ ವೇಳೆ ಉಗ್ರಂ ಮಂಜು-ಶಿಶಿರ್ ನಡುವೆ ಫೈಟ್ : ಮತ್ತೆ ರಣರಂಗವಾಯ್ತು ದೊಡ್ಮನೆ..!