ಸ್ಯಾಂಡಲ್ವುಡ್ ನಟಿ ತನಿಷಾ ಕುಪ್ಪಂಡ ಬಿಗ್ಬಾಸ್ ಶೋಗೆ ಹೋಗಿ ಬಂದಮೇಲೆ ಮತ್ತಷ್ಟು ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ತಮ್ಮದೇ ವ್ಯಾಪಾರ, ವ್ಯವಹಾರಗಳಲ್ಲಿ ಬ್ಯುಸಿಯಾಗಿರುವ ನಟಿ, ಹಲವು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದು, ಇದೀಗ ಪೆನ್ಡ್ರೈವ್ ಮೂಲಕ ಸುದ್ದಿಯಲ್ಲಿದ್ದಾರೆ.
ಹೌದು , ಬಿಗ್ ಬಾಸ್’ ಮನೆಯಲ್ಲಿ ಬೆಂಕಿ ಎಂದು ಕರೆಸಿಕೊಳ್ಳುತ್ತಿದ್ದ ನಟಿ ತನಿಷಾ ಕುಪ್ಪಂಡ ಈಗ ಪೆನ್ಡ್ರೈವ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ಬಾಸ್ ಬಳಿಕ ಸಕತ್ ಫೇಮಸ್ ಆಗಿರೋ ತನಿಷಾ ಅವರಿಗೆ ಸಿನಿಮಾದಿಂದಲೂ ಆಫರ್ ಬರುತ್ತಿದ್ದು, ಅವರ ಪೆನ್ಡ್ರೈವ್ ಸಿನಿಮಾ ಶೀಘ್ರದಲ್ಲಿಯೇ ತೆರೆಯ ಮೇಲೆ ಬರಲಿದೆ. ಈ ಚಿತ್ರದಲ್ಲಿ ತನಿಷಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾದ ಬಗ್ಗೆ ನಟಿ ಬಹಿರಂಗಪಡಿಸಿದ್ದರು. ಪೆನ್ಡ್ರೈವ್ ಚಿತ್ರದ ಕಥೆ ತುಂಬ ಚೆನ್ನಾಗಿದ್ದು ನಾನು ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದೇನೆ ಎಂದಿದ್ದರು. ಜೊತೆಗೆ ನೀವು ಅಂದುಕೊಂಡಂತೆ ಅದು ಬಹಳ ಸದ್ದು ಮಾಡಿರೋ ಪೆನ್ಡ್ರೈವ್ ಕಥೆಯಲ್ಲ, ಅಂದ್ರೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೇಸ್ ಅಲ್ಲ ಮತ್ತೆ. ಇದರಲ್ಲಿ ಇರೋದೇ ಬೇರೆ ಎಂದು ನಟಿ ತಿಳಿಸಿದ್ದರು.
ಅಂದಹಾಗೆ ಈ ಚಿತ್ರವನ್ನು ಸೆಬಾಸ್ಟಿನ್ ಡೇವಿಡ್ ಮಾಡುತ್ತಿದ್ದಾರೆ. ಲಯನ್ ಆರ್. ವೆಂಕಟೇಶ್ ಮತ್ತು ಲಯನ್ ಎಸ್. ವೆಂಕಟೇಶ್ ಚಿತ್ರದ ನಿರ್ಮಾಪಕರು. ಈ ಚಿತ್ರದ ಶೀರ್ಷಿಕೆ ಕುರಿತು ವಿವರಿಸಿದ್ದ ಅವರು, ಇಂಥದ್ದೊಂದು ಶೀರ್ಷಿಕೆ ನೀಡಿದ ವಾಣಿಜ್ಯ ಮಂಡಳಿಗೆ ಧನ್ಯವಾದ. ಪ್ರಸ್ತುತ ಚಾಲ್ತಿಯಲ್ಲಿರುವ ಪೆನ್ಡ್ರೈವ್ಗೂ ನಮ್ಮ ಚಿತ್ರದ ಶೀರ್ಷಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರೂ ಸ್ಪಷ್ಟಪಡಿಸಿದ್ದರು. ಮಾಲಾಶ್ರೀ ಅವರನ್ನು ನೋಡಿದಾಗ ಅವರು ಮಾಡಿದ ಪೊಲೀಸ್ ಪಾತ್ರ ಮಾಡಬೇಕು ಎಂದು ಆಸೆ ಇತ್ತು. ಇದೀಗ ನೆರವೇರಿದೆ ಎಂದು ತನಿಷಾ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಇನ್ನು ಪ್ರಮುಖವಾಗಿ ಈ ಚಿತ್ರದ ಡೈಲಾಗ್ ಹೇಳುವಾಗ ತನಿಷಾ ಎಡವಟ್ಟು ಮಾಡಿದ್ದು, ಅದರ ತುಣುಕು ರೀಲ್ಸ್ ರೂಪದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಮೊದಲಿಗೆ ನಟಿ, ನಮ್ಮ ಪೆನ್ಡ್ರೈವ್ ಸೆಟ್ಗೆ ಬಂದಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದ ಎಂದಿದ್ದಾರೆ. ನಂತರ ಚಿತ್ರದ ಡೈಲಾಗ್ ಹೇಳಲು ಮುಂದಾದರು. ನಿಮಗೆಲ್ಲಾ ಧನ್ಯವಾದ ಹೇಳ್ತಾ ಎಸಿಪಿ… ಮುಂದೆ ಚಿತ್ರದಲ್ಲಿ ತಮ್ಮ ಹೆಸರು ನೆನಪಾಗದೇ ಥೋ ಥೋ ಥೋ ಹೋಯ್ತದು ಎಂದಿದ್ದಾರೆ. ಇದಷ್ಟೇ ವಿಡಿಯೋ ಈಗ ಸಕತ್ ಸೌಂಡ್ ಮಾಡುತ್ತಿದೆ. ಎಸ್ವಿಎನ್ ಈ ವಿಡಿಯೋ ಹಂಚಿಕೊಂಡಿದೆ.
ಈ ಚಿತ್ರದಲ್ಲಿ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನಾ, ರೇಣುಕಾ, ಗೀತಾ, ಭಾಗ್ಯ, ಮತ್ತು ಗೀತಾ ಪ್ರಿಯಾ ಸೇರಿದಂತೆ ಹಲವರು ನಟಿಸಿದ್ದಾರೆ. ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜನೆ ಮತ್ತು ಸಾಹಿತ್ಯವನ್ನು ಬರೆದಿದ್ದಾರೆ.
ಇದನ್ನೂ ಓದಿ : ಸಿಸಿಬಿ ಮುಚ್ಚಿದ್ರೆ ಬೆಂಗಳೂರು ಸೇಫ್ ಎಂದಿದ್ದ ಭಾಸ್ಕರ್ ರಾವ್ ಆರೋಪಕ್ಕೆ ಪರಮೇಶ್ವರ್ ತಿರುಗೇಟು..!