ಕೇರಳ : ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಸಿನಿಮಾ ಶೂಟಿಂಗ್ ನಡೆಸುವುದಕ್ಕೆ ಅನುಮತಿ ನೀಡ್ಬಾರ್ದು, ಸಂಪೂರ್ಣವಾಗಿ ನಿಷೇಧ ಹೇರಬೇಕೆಂದು ಕೇರಳ ಸರ್ಕಾರಕ್ಕೆ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಭಾನುವಾರ ಸೂಚನೆ ನೀಡಿದೆ.
ಎರ್ನಾಕುಲಂನ ಅಂಕಮಾಲಿ ತಾಲ್ಲೂಕು ಆಸ್ಪತ್ರೆಯಲ್ಲಿ ಜೂನ್ ತಿಂಗಳಲ್ಲಿ ಎರಡು ದಿನಗಳ ಕಾಲ ಮಲಯಾಳಂನ ಖ್ಯಾತ ನಟ ಫಹದ್ ಫಾಸಿಲ್ ಅವರು ನಿರ್ಮಿಸಿ, ನಟಿಸಿರುವ ‘ಪೈಂಗಿಳಿ’ ಚಿತ್ರದ ಚಿತ್ರೀಕರಣ ನಡೆದಿತ್ತು. ಈ ವೇಳೆ ರೋಗಿಗಳಿಗೆ ಅನನುಕೂಲವಾಗಿದೆ ಎಂದು ದೂರುಗಳು ಕೇಳಿಬಂದಿದ್ದವು.
ಈ ಬಗೆಗಿನ ವರದಿಯನ್ನು ಆಧರಿಸಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಆಯೋಗವು ಈ ಕ್ರಮ ಕೈಗೊಂಡಿದೆ. ಇಂಥ ಘಟನೆಗಳು ಮತ್ತೊಮ್ಮೆ ನಡೆಯದಂತೆ ತಾಲ್ಲೂಕು ಆಸ್ಪತ್ರೆಯ ಅಧೀಕ್ಷಕರಿಗೆ ಆಯೋಗ ಎಚ್ಚರಿಕೆ ನೀಡಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳ ಅಧೀಕ್ಷಕರಿಗೂ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಿ ಎಂದು ಆರೋಗ್ಯ ಇಲಾಖೆಯ ನಿರ್ದೇಶಕರಿಗೂ ಆಯೋಗ ಸೂಚಿಸಿದೆ. ಇನ್ನು ಸೂಚನೆಯಲ್ಲಿ ಸರ್ಕಾರಿ ಆಸ್ಪತ್ರೆಗಳು ಜನರು ಚಿಕಿತ್ಸೆಗಾಗಿ ಹೋಗುವ ಸ್ಥಳಗಳಾಗಿವೆ ಮತ್ತು ಅಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡುವುದು ಆಸ್ಪತ್ರೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆಯೋಗ ಹೇಳಿದೆ.
ನಟ ಫಹದ್ ಫಾಸಿಲ್ ಅವರು ನಿರ್ಮಿಸಿ, ನಟಿಸಿರುವ ‘ಪೈಂಗಿಳಿ’ ಚಿತ್ರದ ಶೂಟಿಂಗ್ ವೇಳೆ ನಟರೂ ಸೇರಿ, ಸಿನಿಮಾ ತಂಡದ 50ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಇನ್ನು ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆಯೂ ಶೂಟಿಂಗ್ ನಡೆಸಲಾಗಿತ್ತು ಎನ್ನಲಾಗಿದೆ. ಇದರಿಂದ ಕೆಲವು ರೋಗಿಗಳಿಗೆ ಅನಾನುಕೂಲವಾಗಿದ್ದು, ಈ ರೀತಿ ಮಾಡಿದ್ದು ತಪ್ಪು ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇದೇ ಕಾರಣಕ್ಕೆ ಆಯೋಗ ಸರ್ಕಾರಕ್ಕೆ ಇನ್ಮುಂದೆ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿನಿಮಾ ಶೂಟಿಂಗ್ ನಡೆಸುವುದಕ್ಕೆ ಅನುಮತಿ ನೀಡ್ಬಾರ್ದು, ಸಂಪೂರ್ಣವಾಗಿ ನಿಷೇಧ ಹೇರುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ : ಬೇರು ಭೂಮಿ ತಂಡ ಕಟ್ಟಿ, ಚಿಕ್ಕ ವಯಸ್ಸಿನಿಂದಲೂ ಪರಿಸರ ಸಂರಕ್ಷಿಸುತ್ತಿರುವ ಪರಿಸರ ಸ್ನೇಹಿ ಯಶಸ್ ಯಶೋಗಾಥೆ..!