ಚಿಂತಾಮಣಿಯಲ್ಲಿ ‘ಅಖಂಡ-2’ ಸಿನಿಮಾದ ಟ್ರೇಲರ್ ಲಾಂಚ್ – ಬಾಲಯ್ಯ ಸಿನಿಮಾಗೆ ಶಿವಣ್ಣ ಸಾಥ್!

ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ಸಿನಿಮಾ ಅಖಂಡ-2. ಅಖಂಡ ಚಿತ್ರದ ಮುಂದುವರಿದ ಭಾಗವಾಗಿರುವ ಅಖಂಡ ಸೀಕ್ವೆಲ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಚಿಕ್ಕಬಳ್ಳಾಪುರದ ಚಿಂತಾಮಣಿಯ ಚಿನ್ನಸಂದ್ರ ಬಳಿ ಬೃಹತ್ ವೇದಿಕೆ ಹಾಕಿ ಟ್ರೇಲರ್ ರಿಲೀಸ್ ಮಾಡಲಾಯಿತು. ದೊಡ್ಡ ತಾರಾಬಳಗವೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಭಾಗಿಯಾಗಿ ಬಾಲಯ್ಯ ಚಿತ್ರಕ್ಕೆ ಶುಭ ಹಾರೈಸಿದರು. ಫೈಟ್ ಮಾಸ್ಟರ್ ರವಿವರ್ಮಾ, ಅಯ್ಯಪ್ಪ ಹಾಗೂ ಶರತ್ ಲೋಹಿತಾಶ್ವ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಟ್ರೇಲರ್ ಬಿಡುಗಡೆ ಬಳಿಕ ಶಿವಣ್ಣ ಅವರು, “ಬ್ರದರ್ ಸಿನಿಮಾದ ಟ್ರೇಲರ್ ಲಾಂಚ್ ಇವೆಂಟ್​ಗೆ ಬಂದಿದ್ದೇನೆ. ನಾವು ಒಂದೇ ಕುಟುಂಬ. ಇವರ ತಂದೆ ನನಗೆ ದೊಡ್ಡಪ್ಪ. ಬಾಲಯ್ಯ ನನಗೆ ಅಣ್ಣ. ಇವರ ಕಾರ್ಯಕ್ರಮಕ್ಕೆ ಬರುವುದು ನಮಗೆ ಖುಷಿಯಾಗುತ್ತದೆ” ಎಂದರು.

‘ಕನ್ನಡ ಜನತೆಗೆ ನಮಸ್ಕಾರ. ನನ್ನ ತಮ್ಮ ಶಿವಣ್ಣ, ನನ್ನ ಅಭಿಮಾನಿಗಳಿಗೆ ಹಾಗೆ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿರುವ ಪ್ರೇಕ್ಷಕರಿಗೆ ಹೃದಯಪೂರ್ವಕ ಅಭಿನಂದನೆಗಳು. ನಮ್ಮ ಅಖಂಡ ಸಿನಿಮಾ ಬಿಡುಗಡೆಯಾಗುತ್ತಿದೆ. ಅಖಂಡ ಸಿನಿಮಾ ಕೇವಲ ತೆಲುಗು, ಕನ್ನಡ ಸಿನಿಮಾವಲ್ಲ. ಇದು ಪ್ಯಾನ್ ಇಂಡಿಯಾ ಸಿನಿಮಾ’ ಎಂದು ನಟ ನಂದಮೂರಿ ಬಾಲಕೃಷ್ಣ ಹೇಳಿದರು. ಆ ಬಳಿಕ ಶಿವಣ್ಣ ತಮ್ಮದೇ ಚಿತ್ರದ ಡೈಲಾಗ್ ಹೇಳಿದರು. ನಂತರ ಬಾಲಯ್ಯ ಅವರು ತಮ್ಮ ಸ್ಟೈಲ್​ನಲ್ಲಿ ಡೈಲಾಗ್ ಬಿಟ್ಟರು.ಇದಕ್ಕೆ ನೆರೆದಿದ್ದ ಅಭಿಮಾನಿಗಳು ಸಿಳ್ಳೆ, ಚಪ್ಪಾಳೆ ಹಾಕಿದರು.

ಬೋಯಪಾಟಿ ಶ್ರೀನು ನಿರ್ದೇಶನದ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅಖಂಡ 2 ಸಿನಿಮಾ ಪ್ರತಿಷ್ಠಿತ ‘14 ರೀಲ್ಸ್ ಪ್ಲಸ್’ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿದೆ. ರಾಮ್ ಅಚಂತ ಹಾಗೂ ಗೋಪಿಚಂದ್ ಅಚಂತ ಅವರು ನಿರ್ಮಾಣ ಮಾಡುತ್ತಿದ್ದಾರೆ. ಎಂ. ತೇಜಸ್ವಿನಿ ನಂದಮೂರಿ ಅವರು ಈ ಸಿನಿಮಾವನ್ನು ಪ್ರಸ್ತುತಪಡಿಸಿದ್ದಾರೆ.

ಬಾಲಯ್ಯ ಅವರಿಗೆ ಜೋಡಿಯಾಗಿ ಸಂಯುಕ್ತಾ ಅವರು ನಟಿಸುತ್ತಿದ್ದಾರೆ. ಆದಿ ಪಿನಿಸೆಟ್ಟಿ ಅವರು ಈ ಸಿನಿಮಾಗೆ ಖಳನಾಯಕನಾಗಿದ್ದಾರೆ. ಸಿ. ರಾಮಪ್ರಸಾದ್ ಹಾಗೂ ಸಂತೋಷ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಎ.ಎಸ್. ಪ್ರಕಾಶ್ ಅವರ ಕಲಾ ನಿರ್ದೇಶನ, ತಮ್ಮಿರಾಜು ಅವರ ಸಂಕಲನ, ರಾಮ್-ಲಕ್ಷ್ಮಣ್‌ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ಡಿಸೆಂಬರ್ 5ರಂದು ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್​ ಸಂತೋಷ್ ಭೇಟಿಯಾದ ವಿಜಯೇಂದ್ರ – ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ!

Btv Kannada
Author: Btv Kannada

Read More