ಚಂದಿರನಿಗೂ ಮಾನವನಿಗೂ ಎಲ್ಲಿಲ್ಲದ ನಂಟು. ಚಂದಿರನನ್ನು ತೋರಿಸಿ ಅಮ್ಮ ಕೈತುತ್ತು ತಿನಿಸಿದ, ಚಂದಿರನ ಬೆಳದಿಂಗಳಲ್ಲಿ ಊರೆಲ್ಲ ಸುತ್ತಾಡಿದ ನೆನಪುಗಳು ಕಣ್ಣಮುಂದೆ ಬರುತ್ತದೆ. ಆದರೆ ಭೂಮಿಯ ಉಪಗ್ರಹವಾಗಿರುವ ಚಂದ್ರನು ಈಗ ಇಳೆಯಿಂದ ಇಂಚಿಂಚು ದೂರ ಸರಿಯುತ್ತಿದ್ದು, ಭೂಮಿ ಮೇಲಿನ 1 ದಿನದ 24 ಗಂಟೆ ಮುಂದೆ 25 ಗಂಟೆಯಾಗಿ ಬದಲಾಗಲಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.
ಹೌದು, ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ತಂಡವು 90 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಬಂಡೆಯ ಮೇಲೆ ಮಾಡಿರುವ ಅಧ್ಯಯನದಿಂದ ಭವಿಷ್ಯದ ದಿನಗಳಲ್ಲಿ ಭೂಮಿಯಿಂದ ಚಂದ್ರ ದೂರ ಸಾಗುತ್ತಲೇ ಹೋಗುವ ಅಪಾಯವಿದೆ ಎಂದು ಹೇಳಿದೆ.
ಪ್ರತಿ ವರ್ಷ ಚಂದ್ರನು ಭೂಮಿಯಿಂದ 3.8 ಸೆಂಟಿಮೀಟರ್ ದೂರವಾಗುತ್ತಿದ್ದಾನೆ. ಇದು ನಮ್ಮ ಗ್ರಹದಲ್ಲಿನ ದಿನಗಳ ಮೇಲೆ ಪರಿಣಾಮ ಬೀರುತ್ತದೆ. ಇನ್ಮುಂದೆ ದಿನಕ್ಕೆ 24 ಗಂಟೆ ಬದಲಾಗಿ 25 ಗಂಟೆಯಾಗಲಿದ್ದು, ಚಂದ್ರನ ಜರುಗುವಿಕೆಯು ಹೊಸದೇನಲ್ಲ. ಇದು ಸಹಜ ಪ್ರಕ್ರಿಯೆಯಾಗಿದೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.
ಇನ್ನು 1.4 ಶತಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಒಂದು ದಿನ ಕೇವಲ 18 ಗಂಟೆಗಳು ಮಾತ್ರ ಇತ್ತು. ಈಗ ವರ್ಷಕ್ಕೆ ಸರಿಸುಮಾರು 3.8 ಸೆಂ.ಮೀ. ಗಳಷ್ಟು ಅಂತರದಲ್ಲಿ ಚಂದ್ರ ಭೂಮಿ ಯಿಂದ ಹಿಂದೆ ಸರಿಯುತ್ತಿದೆ. ಅಂತಿಮವಾಗಿ ಇದು 200 ಮಿಲಿಯನ್ ವರ್ಷ ಗಳಲ್ಲಿ ಭೂಮಿಯ ದಿನಗಳನ್ನು 25 ಗಂಟೆಗಳ ಕಾಲ ಉಂಟುಮಾಡುತ್ತದೆ ಎಂದು ಸಂಶೋಧನಾ ತಂಡ ತಿಳಿಸಿದೆ.
ಇದನ್ನೂ ಓದಿ : ಜೈಲಿನಲ್ಲಿರೋ ದಾಸನನ್ನ ಎಷ್ಟು ಜನ ಭೇಟಿಯಾಗಿದ್ದಾರೆ, ಯಾರ‍್ಯಾರು ಗೊತ್ತಾ? – ಇಲ್ಲಿದೆ ಲಿಸ್ಟ್..!