ಬೆಂಗಳೂರು : ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸದ್ಯ ಊಹಿಸಲಾಗದ ಬೆಳವಣಿಗೆಗಳು ಆಗುತ್ತಿವೆ. ಮುಡಾ ಹಗರಣವನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯಪಾಲರ ಶೋಕಾಸ್ ನೋಟಿಸ್ ಬರುತ್ತಿದ್ದಂತೆಯೇ ಇತ್ತ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಿನ್ನೆ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಮುಡಾ ಪ್ರಾಸಿಕ್ಯೂಷನ್ ನೊಟೀಸ್ ವಾಪಸಿಗೆ ನಿರ್ಣಯ ಅಂಗೀಕರಿಸಿದೆ. ಅಲ್ಲದೇ ಡಿಕೆ ಶಿವಕುಮಾರ್ ಸೇರಿದಂತೆ ಇತರೆ ಹಿರಿಯ ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಶೋಕಾಸ್ ನೋಟಿಸ್ ವಾಪಸ್ ಪಡೆಯಬೇಕೆಂದು ರಾಜ್ಯಪಾಲರಿಗೆ ಸಲಹೆ ನೀಡಿದ್ದಾರೆ.
ಆದ್ರೆ, ಇದೀಗ ಉದ್ಭವಿಸಿರುವ ಪ್ರಶ್ನೆ ರಾಜ್ಯಪಾಲರ ಮುಂದಿನ ನಡೆ ಏನು? ಸಂಪುಟದ ನಿರ್ಣಯವನ್ನು ಒಪ್ಪಿಕೊಂಡು ರಾಜ್ಯಪಾಲರು ನೋಟಿಸ್ ವಾಪಸ್ ಪಡೆದುಕೊಳ್ಳುತ್ತಾರಾ? ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಬಗ್ಗೆ ಏನ್ ತೀರ್ಮಾನ ಮಾಡ್ತಾರೆ ಎಂಬೆಲ್ಲ ಪ್ರಶ್ನೆಗಳು ಎದ್ದಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಿಸಲು ಅನುಮತಿ ಕೊಡ್ತಾರಾ ಎಂದು ಕಾದು ನೋಡಬೇಕು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ ಬಗ್ಗೆ ಆಗಸ್ಟ್ 5ರಂದು ತೀರ್ಮಾನ ಮಾಡುವ ಸಾಧ್ಯತೆಯಿದೆ. ಸದ್ಯ ದೆಹಲಿಯಲ್ಲಿರುವ ರಾಜ್ಯಪಾಲರು ಆಗಸ್ಟ್ 5ರಂದೇ ಬೆಂಗಳೂರಿಗೆ ಬರಲಿದ್ದಾರೆ. ದೆಹಲಿಯಲ್ಲಿ ಕಾನೂನು, ಸಂಸದೀಯ ತಜ್ಞರ ಜೊತೆ ಸಮಾಲೋಚನೆ ನಡೆಸಿ, ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ಗೆ ಇರುವ ಅವಕಾಶಗಳೇನು, ಪ್ರಾಸಿಕ್ಯೂಷನ್ಗೆ ಕೊಟ್ಟರೆ ಸಾಧಕ-ಬಾಧಕಗಳು ಏನು? ಕಾನೂನು ಮಾರ್ಗಗಳೇನು? ಇದೆಲ್ಲದರ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದ್ದಾರೆ.
ರಾಜ್ಯಪಾಲರು ಸಂಪುಟ ನಿರ್ಣಯದ ನಂತರ ಉಂಟಾಗಿರುವ ಸಂಕೀರ್ಣತೆಗಳ ಬಗ್ಗೆ ಚರ್ಚೆ ಮಾಡಿ ಪ್ರಾಸಿಕ್ಯೂಷನ್ ಬಗ್ಗೆ ಅಂತಿಮ ನಿರ್ಧಾರ ಏನೆಂಬುದನ್ನು ತಿಳಿಸಲಿದ್ದಾರೆ. ಒಟ್ಟಿನಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿರೋದು ಕಾಂಗ್ರೆಸ್ ಸರ್ಕಾರದ ಬುಡವನ್ನೇ ಅಲುಗಾಡಿಸಿದೆ.
ಇದನ್ನೂ ಓದಿ : ಅಕ್ಷರಶಃ ನರಕವಾದ ದೇವರನಾಡು – ಮೃತರ ಸಂಖ್ಯೆ 300ಕ್ಕೆ ಏರಿಕೆ..!