ಬೆಂಗಳೂರು : ಬಾಗಲಗುಂಟೆ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಮಮತಾ ಎಂಬ 31 ವರ್ಷದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಮತಾ ಸಾವಿಗೂ ಮುನ್ನ ಇಬ್ಬರು ಯುವಕರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಬಗ್ಗೆ ಕೆಟ್ಟದ್ದಾಗಿ ಏನಾದ್ರು ಬಂದರೆ ನೀವೆ ಹೊಣೆ ಎಂದು ಮಮತಾ ಡೆತ್ ನೋಟ್ ಬರೆದಿದ್ದಾಳೆ. ಆಕೆಯ ಸಾವಿಗೆ ಅವಳದ್ದೇ ಇಬ್ಬರು ಕ್ಲಾಸ್ಮೇಟ್ಗಳು ಕಾರಣವಾಗಿದ್ದು, ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಮಮತಾಗೆ ಆಕೆಯ ಕ್ಲಾಸ್ಮೇಟ್ಸ್ಗಳಿಂದಲೇ ಅಶ್ಲೀಲ ಮೆಸೇಜ್ಗಳು ಬರುತ್ತಿದ್ದವು ಅನ್ನೋ ಆರೋಪ ಕೇಳಿ ಬಂದಿದ್ದು, ಅಶೋಕ್ ಹಾಗೂ ಗಣೇಶ್ ಎಂಬ ಇಬ್ಬರು ಯುವಕರ ವಿರುದ್ದ ಮಮತಾ ಡೆತ್ನೋಟ್ ಬರೆದಿದ್ದಾಳೆ.
ಈ ಇಬ್ಬರು “ನನ್ನ ಜೊತೆ ಸಹಕರಿಸು, ನೈಟ್ಔಟ್ ಹೋಗೋಣವೆಂದು ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ಮಮತಾ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ. ಮಮತಾಳ ಕ್ಲಾಸ್ಮೇಟ್ಸ್ ಆಗಿದ್ದ ಗಣೇಶ್ ಹಾಗೂ ಅಶೋಕ್ ಅಶ್ಲೀಲ ಮೆಸೇಜ್ ಕಳಿಸಿ ನಮ್ಮ ಜೊತೆ ಸಹಕರಿಸದಿದ್ದರೆ ನಿನ್ನನ್ನು ಸುಮ್ಮನೇ ಬಿಡೋದಿಲ್ಲ ನಿನ್ನ ಸಂಸಾರವನ್ನು ಹಾಳು ಮಾಡುತ್ತೇವೆ ಎಂದು ಸಂದೇಶಗಳನ್ನು ಕಳಿಸುತ್ತಿದ್ದರಂತೆ. ಇದರಿಂದ ಮನನೊಂದ ಮಹಿಳೆ ಆರೋಪಿಗಳ ವಿರುದ್ಧ ಡೆತ್ನೋಟ್ ಬರೆದಿಟ್ಟು, ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸದ್ಯ ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಮೃತ ಮಮತಾ ಪತಿ ಲೋಕೇಶ್ರಿಂದ ದೂರು ದಾಖಲಾಗಿದೆ. ಡೆತ್ನೋಟ್ ಆಧರಿಸಿ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ. ಮಮತಾ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಸ್ವಿಚ್ ಮಾಡಿಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ : ಕಾಂಪೌಂಡ್ ಜಾಗಕ್ಕಾಗಿ ಜಟಾಪಟಿ – ಬೆಂಗಳೂರಿನ ವೈಷ್ಣವಿ ಸಫೈರ್ ಮಾಲ್ ವಿರುದ್ದ FIR ದಾಖಲು..!