ಆನೇಕಲ್ : ಪುರಸಭೆ ಕಾಂಗ್ರೆಸ್ ಸದಸ್ಯ ರವಿಯನ್ನು ಕೊಂದಿದ್ದ ಕುಖ್ಯಾತ ರೌಡಿಶೀಟರ್ ಕಾರ್ತಿಕ್ ಅಲಿಯಾಸ್ ಜೆ.ಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಈತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಆನೇಕಲ್ ತಾಲ್ಲೂಕಿನ ಮೈಸೂರಮ್ಮನ ದೊಡ್ಡಿ ಬಳಿ ಫೈರಿಂಗ್ ನಡೆದಿದೆ. ಆನೇಕಲ್ ಭಾಗದ ಕುಖ್ಯಾತ ರೌಡಿ ಶೀಟರ್ ಆಗಿರುವ ಜೆಕೆ, ಮೈಸೂರಮ್ಮನ ದೊಡ್ಡಿಯಲ್ಲಿ ಅವಿತು ಕುಳಿತಿದ್ದ. ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧನಕ್ಕೆ ತೆರಳಿದ್ದರು. ಶರಣಾಗಲು ಸೂಚಿಸಿ ಆನೇಕಲ್ ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಈ ವೇಳೆ ಆರೋಪಿ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿ ಪೊಲೀಸ್ ಸಿಬ್ಬಂದಿ ಸುರೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ. ತಕ್ಷಣವೇ ಆತ್ಮ ರಕ್ಷಣೆಗಾಗಿ ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿ ಕಾರ್ತಿಕ್ಗೆ ಬಲಗಾಲಿಗೆ ಗುಂಡು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪುರಸಭಾ ಸದಸ್ಯ ರವಿಯನ್ನು ಕಳೆದ 24ನೇ ತಾರೀಕು ಬರ್ಬರವಾಗಿ ರೌಡಿಶೀಟರ್ ಕಾರ್ತಿಕ್ ಗ್ಯಾಂಗ್ ಹತ್ಯೆ ಮಾಡಿತ್ತು. ರವಿ ಮನೆಯಲ್ಲಿದ್ದಾಗ ಕಾರ್ತಿಕ್ ಗ್ಯಾಂಗ್ ಮನಗೆ ನುಗ್ಗಿ ಹಲ್ಲೆ ಮಾಡುತ್ತ ರಸ್ತೆ ಮಧ್ಯೆವರೆಗೆ ಎಳೆದೊಯ್ದು ಕೊಲೆ ಮಾಡಿತ್ತು. ಬಳಿಕ ಆರೋಪಿಗಳಾದ ಕಾರ್ತಿಕ್ ಅಲಿಯಾಸ್ ಜೆಕೆ, ಹರೀಶ್ ಅಲಿಯಾಸ್ ಹಂದಿ ಹರೀಶ್, ವಿನಯ್ ಅಲಿಯಾಸ್ ವಿನಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಬಂಧನಕ್ಕೆ ಪೊಲೀಸರು ಎರಡು ತಂಡ ರಚನೆ ಮಾಡಿ ಒಂದು ವಾರದಿಂದ ಹುಡುಕಾಟ ನಡೆಸುತ್ತಿದ್ದರು. ಆರೋಪಿಗಳ ಪೈಕಿ ಹರೀಶ್ ಮತ್ತು ವಿನಯ್ ಕೋರ್ಟಿಗೆ ಶರಣಾಗಿದ್ದಾರೆ. ಪ್ರಮುಖ ಆರೋಪಿ ರೌಡಿಶೀಟರ್ ಜೆಕೆ ಕಾರ್ತಿಕ್ ತಲೆಮರೆಸಿಕೊಂಡಿದ್ದ. ಸದ್ಯ ಈತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ವಯನಾಡು ಭೂಕುಸಿತ ದುರಂತದಲ್ಲಿ ಕರ್ನಾಟಕದ ನಾಲ್ವರು ಸಾವು, ಹಲವರು ನಾಪತ್ತೆ..!