ಬೆಂಗಳೂರು : ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಗುಡ್ ನ್ಯೂಸ್. ಇಂದಿನಿಂದ (ಜುಲೈ 29) ಪೀಣ್ಯ ಫ್ಲೈ ಓವರ್ ಮೇಲೆ ಭಾರೀ ವಾಹನ ಸೇರಿ ಎಲ್ಲಾ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದ್ದು, ಪ್ರತಿ ಶುಕ್ರವಾರ ಮಾತ್ರ ಭಾರಿ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ.
ಮೇಲ್ಸೇತುವೆ ವಿಶೇಷ ದುರಸ್ತಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿರುವುದರಿಂದ ಪ್ರತಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೂ ಭಾರಿ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಉಳಿದ ದಿನ ಪ್ಲೈ ಓವರ್ ಮೇಲೆ ಬಸ್, ಲಾರಿ, ಟ್ರಕ್ ಸೇರಿದಂತೆ ಭಾರೀ ವಾಹನಗಳು ಮುಕ್ತವಾಗಿ ಸಂಚರಿಸಬಹುದಾಗಿದೆ. ಆದರೆ, ಭಾರಿ ವಾಹನಗಳು ಮಾತ್ರ ಮೇಲ್ಸೇತುವೆ ಎಡ ಪಥದಲ್ಲಿ ಗರಿಷ್ಠ 40 ಕಿ.ಮೀ ವೇಗ ಮಿತಿಯಲ್ಲಿ ಸಂಚರಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ.
ನಗರದ ತುಮಕೂರು ರಸ್ತೆಯಲ್ಲಿರುವ 15 ಮೀಟರ್ ಅಗಲದ, 4.2 ಕಿಮೀ ಉದ್ದದ ಮೇಲ್ಸೇತುವೆಯಲ್ಲಿ 2021ರ ಡಿಸೆಂಬರ್ನಿಂದ ಬಸ್ಗಳು ಮತ್ತು ಟ್ರಕ್ಗಳಂತಹ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಫ್ಲೈಓವರ್ನಲ್ಲಿ ಪ್ರಿಸ್ಟ್ರೆಸ್ಡ್ ಕೇಬಲ್ಗಳು ತುಕ್ಕು ಹಿಡಿದ ಹಿನ್ನೆಲೆಯಲ್ಲಿ ರಿಪೇರಿ ಮಾಡುವ ಅಗತ್ಯವಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 38.5 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕೇಬಲ್ಗಳ ಅಳವಡಿಕೆ ಕಾರ್ಯ ನಡೆದಿದೆ.
ಇದನ್ನೂ ಓದಿ : ಮುಡಾ ಅಕ್ರಮ ಖಂಡಿಸಿ ಆಗಸ್ಟ್ 3ಕ್ಕೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ : ಇಂದು ಪೂರ್ವ ತಯಾರಿ ಸಭೆ..!