ಬೆಂಗಳೂರು : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಆಗಸ್ಟ್ 3ರಿಂದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಮೈಸೂರು ಪಾದಯಾತ್ರೆಯ ರೂಪುರೇಷೆ ಸಂಬಂಧ ಮೈತ್ರಿ ನಾಯಕರು ನಿನ್ನೆ ಜಂಟಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಶನಿವಾರದಂದು ಬೆಂಗಳೂರಿನ ನೈಸ್ ರಸ್ತೆಯಿಂದ ಪಾದಯಾತ್ರೆ ಆರಂಭವಾಗಲಿದ್ದು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಹೆಚ್.ಡಿ ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಸುಮಾರು 7 ದಿನಗಳ ಕಾಲ ಪಾದಯಾತ್ರೆ ಮೂಲಕ ತೆರಳಿ ಆಗಸ್ಟ್ 10ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಮೈಸೂರಿನಲ್ಲಿ ನಡೆಯುವ ಪಾದಯಾತ್ರೆ ಸಮಾರೋಪಕ್ಕೆ ಕೇಂದ್ರ ನಾಯಕರನ್ನು ಕರೆಸಲು ದೋಸ್ತಿ ನಾಯಕರು ಪ್ಲ್ಯಾನ್ ಮಾಡಿದ್ದಾರೆ.
ಇನ್ನು, ಈ ಕುರಿತು ಇಂದು ಬಿಜೆಪಿ ಪೂರ್ವ ತಯಾರಿ ಸಭೆ ನಡೆಸಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ಅರಮನೆ ಮೈದಾನದಲ್ಲಿ ಮೀಟಿಂಗ್ ನಡೆಯಲಿದ್ದು, ಹಾಲಿ-ಮಾಜಿ ಸಂಸದರು, ಶಾಸಕರು, MLCಗಳು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಮೀಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ.
ಮೀಟಿಂಗ್ನಲ್ಲಿ ಪಾದಯಾತ್ರೆ ಯಶಸ್ವಿಯಾಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾರ್ಯತಂತ್ರ ರೂಪಿಸಲಿದ್ದಾರೆ. ಪಾದಯಾತ್ರೆಯ ರೂಟ್, ಪ್ರತಿದಿನ ಎಷ್ಟು ದೂರ ಸಾಗಬೇಕು, ಎಲ್ಲೆಲ್ಲಿ ಉಳಿಯಬೇಕು, ಯಾರಿಗೆ ಪಾದಯಾತ್ರೆ ಜವಾಬ್ದಾರಿ ವಹಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮೈಸೂರು ಭಾಗದ ಶಾಸಕರು, ಸಂಸದರು, ಮುಖಂಡರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಬಗ್ಗೆ ಹಾಗೂ ಕಾರ್ಯಕರ್ತರನ್ನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ನಾಯಕರು ಪ್ಲ್ಯಾನ್ ಮಾಡಲಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ – ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಇಬ್ಬರು ಸಾವು..!