ಹಾವೇರಿ : ನಗರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಜಿ ಪ್ಲಸ್ ಮನೆ’ಗಳ ಕಾಮಗಾರಿಯಲ್ಲಿ ನಡೆದಿರುವ ಕಳಪೆ ಮಟ್ಟದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ.

ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 1112 ಜಿ ಪ್ಲಸ್ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ಸುಮಾರು 67 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ. ಈ ಮನೆಗಳ ನಿರ್ಮಾಣದ ಗುತ್ತಿಗೆಯನ್ನು ಎ.ಜೆ.ಜೆ ಕನ್ಸಟ್ರಕ್ಷನ್ ಸಿಂಧನೂರು ಎಂಬ ಕಂಪನಿ ವಹಿಸಿಕೊಂಡಿದೆ. ಆದರೆ, ನಿರ್ಮಾಣ ಹಂತದಲ್ಲಿರುವ ಮನೆಗಳ ಗುಣಮಟ್ಟ ಕಳಪೆಯಾಗಿದೆ ಮತ್ತು ಕಾಮಗಾರಿಯಲ್ಲೂ ಅವ್ಯವಹಾರ ನಡೆದಿದೆ ಎಂದು ದೂರುಗಳು ಬಂದಿದ್ದವು.

ಸಾರ್ವಜನಿಕ ಕಾರ್ಯಕರ್ತ ಶಕ್ತಿ ಕುಮಾರ್ ಅವರು ಸಲ್ಲಿಸಿದ್ದ ದೂರಿನನ್ವಯ, ಲೋಕಾಯುಕ್ತ ಪೊಲೀಸರು ಹಾಗೂ ತಾಂತ್ರಿಕ ವಿಭಾಗದ ಅಧಿಕಾರಿಗಳ ತಂಡವು ಬುಧವಾರ ಬೆಳಗ್ಗೆ ಏಕಕಾಲಕ್ಕೆ ಶಿದ್ದದೇವಪೂರು ಮತ್ತು ನಾಗೇಂದ್ರಮಟ್ಟಿ ಸೈಟ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಪರಿಶೀಲನೆಯಲ್ಲಿ, ಮನೆಗಳ ನಿರ್ಮಾಣದಲ್ಲಿ ಸಂಪೂರ್ಣವಾಗಿ ಕಳಪೆ ಸಾಮಗ್ರಿ ಬಳಸಲಾಗಿದೆ ಎಂಬ ಆರೋಪಗಳು ಮೇಲ್ನೋಟಕ್ಕೆ ಕಂಡುಬಂದಿವೆ.

ಲೋಕಾಯುಕ್ತ ಅಧಿಕಾರಿಗಳು ಕಾಮಗಾರಿಯ ವಿವರಗಳು, ಗುಣಮಟ್ಟದ ಮಾನದಂಡಗಳು ಮತ್ತು ಬಳಕೆಯಾದ ಸಾಮಗ್ರಿಗಳ ಕುರಿತು ಮಾಹಿತಿ ಸಂಗ್ರಹಿಸಿದ್ದು, ಗುತ್ತಿಗೆ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಇದೆ. ಕಳಪೆ ಕಾಮಗಾರಿಯಿಂದ ಸಾರ್ವಜನಿಕರಿಗೆ ಒದಗಿಸಬೇಕಾದ ಸೂರು ಕಳಪೆಯಾಗುತ್ತಿರುವ ಈ ಪ್ರಕರಣವು ಗುತ್ತಿಗೆದಾರರಿಗೆ ಭಾರಿ ಆಘಾತ ನೀಡಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : PDO ಕಿರುಕುಳಕ್ಕೆ ಬೇಸತ್ತು ಪಂಚಾಯತ್ ಲೈಬ್ರೆರಿಯನ್ ಆತ್ಮಹತ್ಯೆ?







