ಬೆಂಗಳೂರು : ಮುಂಬೈ ಸೇರಿದಂತೆ ಇತರ ಪ್ರಮುಖ ನಗರಗಳು ಎರಡನೇ ವಿಮಾನ ನಿಲ್ದಾಣ ಹೊಂದಿರುವಂತೆ ಬೆಂಗಳೂರಿನಲ್ಲೂ ಎರಡನೇ ವಿಮಾನ ನಿಲ್ದಾಣ ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿದ್ದು, ಸ್ಥಳವನ್ನು ಅಂತಿಮಗೊಳಿಸಿಲ್ಲ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬೆಂಗಳೂರು ಹೊರತಾಗಿ ಬೇರೆ ಕಡೆ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆ ಇದೆಯಾ ಎನ್ನುವ ಬಿಜೆಪಿ ಸದಸ್ಯ ನವೀನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ರೀತಿಯ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಬೆಂಗಳೂರಿಗೆ 2 ನೇ ವಿಮಾನ ನಿಲ್ದಾಣ ಮಾಡುವ ಪ್ಲಾನ್ ಇದೆ ಎಂದಿದ್ದಾರೆ.
ನಮಗೆ 2033ರವರೆಗೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಗ್ರಿಮೆಂಟ್ ಇದೆ. ಆ ನಂತರ ನಾವು ಮತ್ತೊಂದು ವಿಮಾನ ನಿಲ್ದಾಣ ಮಾಡಬಹುದು. ಈಗಿನಿಂದಲೇ ಪ್ರಸ್ತಾಪ ಮಾಡುತ್ತಿದ್ದೇವೆ. ಏಳೆಂಟು ಜಾಗ ಗುರುತಿಸಿದ್ದೇವೆ, ಏರ್ ಪೋರ್ಟ್ ಜಾಗ ಮೆರಿಟ್ ಮೇಲೆ ಮಾಡುತ್ತೇವೆ. ಸೂಕ್ತ ಮಾನದಂಡದ ಮೇಲೆ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಗುರಿ ಇದೆ. ಲಾಜಿಸ್ಟಿಕ್, ಪ್ಯಾಸೆಂಜರ್ ಕನೆಕ್ಟಿವಿಟಿ ನೋಡಿ ಬೆಂಗಳೂರು ರಾಜ್ಯಕ್ಕೆ ಅನುಕೂಲವಾಗುವ ರೀತಿಯಲ್ಲೇ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನೂ ಚಿತ್ರದುರ್ಗದಲ್ಲಿ ಜಿಲ್ಲಾ ವಿಮಾನ ನಿಲ್ದಾಣ ಮಾಡೋಣ, ಆದರೆ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಅತಿ ಅಗತ್ಯ ಮತ್ತು ಸೂಕ್ತ ಸ್ಥಳವಾಗಿದೆ, ಆದರೆ ಚಿತ್ರದುರ್ಗಕ್ಕೆ ಕೈಗಾರಿಕೆ ಸ್ಥಾಪಿಸುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ವಿಧಾನಸಭೆ ಅಧಿವೇಶನದಲ್ಲೂ ಕರಾವಳಿ ಮಳೆಯ ಪ್ರಸ್ತಾಪ..!