ಬೆಂಗಳೂರು : ಬಿಡಿಎ ಸೈಟು ಹಂಚಿಕೆ ಅಕ್ರಮ ಆರೋಪ ಪ್ರಕರಣದ ಆರೋಪಿಯೊಬ್ಬರನ್ನು ಬಚಾವ್ ಮಾಡಲು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಹೆಡ್ಕಾನ್ಸ್ಟೇಬಲ್ 30ಲಕ್ಷ ರೂ. ಡೀಲ್ ನಡೆಸಿ ಹಣ ಪಡೆದಿದ್ದ ವಿಚಾರ ಬಯಲಾಗಿದೆ.
ಅಕ್ರಮ ಎಸಗಿ ಹಣ ಪಡೆದ ಆರೋಪ ಎದುರಿಸುತ್ತಿರುವ ಸಿಸಿಬಿ ಪೊಲೀಸ್ ಹೆಡ್ಕಾನ್ಸ್ಟೇಬಲ್ ಯತೀಶ್ ಅವರನ್ನು ಸೇವೆಯಿಂದ ಅಮಾನುತುಗೊಳಿಸಿ ಕಮಿಷನರ್ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. ಜೊತೆಗೆ, ಇಡೀ ಅಕ್ರಮದ ಕುರಿತು ಸಮಗ್ರ ತನಿಖೆಗೂ ಆದೇಶಿಸಿದ್ದಾರೆ ಎಂದು ಉನ್ನತ ಮೂಲಗಗಳಿಂದ ತಿಳಿದು ಬಂದಿದೆ.
ಬಿಡಿಎ ನಿವೇಶನ ಹಂಚಿಕೆ ಅಕ್ರಮ, ಭ್ರಷ್ಟಾಚಾರ ಆರೋಪದ ಉರುಳಿನಲ್ಲಿ ಬಿಡಿಎ ಡೆಪ್ಯುಟಿ ಸೆಕ್ರೆಟರಿ-4 ಅಧಿಕಾರಿ ಮಂಗಳ ಎಂಬವರಿಗೆ ಬಂಧನ ಭೀತಿ ಎದುರಾಗಿತ್ತು. ಈ ಪ್ರಕರಣದ ತನಿಖಾ ತಂಡದ ಭಾಗವಾಗಿದ್ದ ಹೆಡ್ಕಾನ್ಸ್ಟೇಬಲ್ ಯತೀಶ್, ಬಿಡಿಎ ಅಧಿಕಾರಿ ಮಂಗಳರನ್ನು ಪ್ರಕರಣದಲ್ಲಿ ಬಚಾವ್ ಮಾಡಲು ಸರ್ಕಸ್ ನಡೆಸಿದ್ದರು.
ಅಧಿಕಾರಿ ಮಂಗಳ ಜತೆಯೇ ಮಾತುಕತೆ ನಡೆಸಿ ಪ್ರಕರಣದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿ 30ಲಕ್ಷ ರೂ. ಪಡೆದಿದ್ದರು. ಹಣ ಸಂದಾಯವಾದ ಬಳಿಕ ಮಹಿಳಾ ಅಧಿಕಾರಿಯೂ ನಿರಾಳರಾಗಿದ್ದರು ಎಂಬ ಆರೋಪವಿದೆ.
ಈ ಪ್ರಕರಣದ ತನಿಖೆ ವಿಳಂಬವಾಗುತ್ತಿರುವ ಬಗ್ಗೆ ಗಮನಿಸಿದ ಹಿರಿಯ ಅಧಿಕಾರಿಗಳು, ಕೇಸ್ ಸಿಸಿಬಿಗೆ ವರ್ಗವಣೆ ಮಾಡಿದ್ದರು. ಅಧಿಕಾರಿಗಳು ನಡೆಸಿದ ಆಂತರಿಕ ತನಿಖೆಯಲ್ಲಿ ಸಿಸಿಬಿ ಹೆಡ್ಕಾನ್ಸ್ಟೇಬಲ್ ಯತೀಶ್ ಹಾಗೂ ಬಿಡಿಎ ಮಹಿಳಾ ಅಧಿಕಾರಿ ಮಂಗಳ ನಡುವಣ ಒಪ್ಪಂದ, ಹಣ ಸಂದಾಯದ ಅಸಲಿಯತ್ತು ಬಯಲಾಗಿತ್ತು. ಇದೇ ವರದಿಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಕಳುಹಿಸಲಾಗಿತ್ತು. ವರದಿ ಅನ್ವಯ ಕರ್ತವ್ಯಲೋಪ ಹಾಗೂ ದುರ್ನಡತೆ ಆಧಾರದಲ್ಲಿ ಯತೀಶ್ ರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಇದನ್ನೂ ಓದಿ : ಪೋಕ್ಸೋ ಕೇಸ್ನಲ್ಲಿ ಯಡಿಯೂರಪ್ಪಗೆ ಬಿಗ್ ರಿಲೀಫ್ – ವಿಚಾರಣೆಗೆ ಹಾಜರಾಗಲು ವಿನಾಯಿತಿ ನೀಡಿದ ಹೈಕೋರ್ಟ್..!