ಬಿಹಾರ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ – ನ.6, 11ರಂದು ಮತದಾನ.. ನ.14ಕ್ಕೆ ಫಲಿತಾಂಶ!

ನವದೆಹಲಿ : ಕೇಂದ್ರ ಚುನಾವಣಾ ಆಯೋಗವು ಕೊನೆಗೂ ಬಿಹಾರ ವಿಧಾನಸಭಾ ಎಲೆಕ್ಷನ್ ದಿನಾಂಕ ಘೋಷಣೆ ಮಾಡಿದೆ. ಈ ಬಾರಿ 2 ಹಂತಗಳಲ್ಲಿ ಮತದಾನ ನಡೆಯಲಿದೆ.

ನವೆಂಬರ್‌ 6ರ ಗುರುವಾರ ಮೊದಲ ಹಂತ, ನವೆಂಬರ್‌ 11ರ ಮಂಗಳವಾರ 2ನೇ ಹಂತದಲ್ಲಿ ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್‌ 14 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅಕ್ಟೋಬರ್‌ 10 ರಂದು ಗೆಜೆಟ್‌ ಅಧಿಸೂಚನೆ ಪ್ರಕಟವಾಗಲಿದೆ. ಅದೇ ರೀತಿ 2ನೇ ಹಂತದಲ್ಲಿ 122 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅಕ್ಟೋಬರ್‌ 13ರಂದು ಅಧಿಸೂಚನೆ ಪ್ರಕಟಿಸಲಾಗುತ್ತದೆ.

ಮೊದಲ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅ.17 ಕೊನೆಯ ದಿನವಾಗಿದ್ದು, 2ನೇ ಹಂತದ ಕ್ಷೇತ್ರಗಳಿಗೆ ಅ.21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಕ್ಟೋಬರ್‌ 18‌ ಮತ್ತು ಅಕ್ಟೋಬರ್‌ 21 ರಂದು ಕ್ರಮವಾಗಿ ಮೊದಲ ಮತ್ತು 2ನೇ ಹಂತದ ಕ್ಷೇತ್ರಗಳಿಗೆ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಲಿದೆ. ಅಕ್ಟೋಬರ್‌ 20 ಹಾಗೂ ಅ.23 ಕ್ರಮವಾಗಿ ನಾಮಪತ್ರ ಹಿಂಪಡೆಯಲು ಕೊನೆಯದಿನವಾಗಿದೆ. ನವೆಂಬರ್‌ 6ರಂದು ಚುನಾವಣೆ ನಡೆಯಲಿದೆ. ನವೆಂಬರ್‌ 14ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಹಾರದಲ್ಲಿರುವ 243 ವಿಧಾನಸಭಾ ಕ್ಷೇತ್ರಗಳ ಪೈಕಿ 203 ಸಾಮಾನ್ಯ ಕ್ಷೇತ್ರಗಳಾಗಿದ್ದು, 2 ಎಸ್ಟಿ ಹಾಗೂ 38 ಎಸ್ಸಿ ಮೀಸಲು ಕ್ಷೇತ್ರಗಳಾಗಿವೆ. ಬಿಹಾರದಲ್ಲಿ ಒಟ್ಟು 7.43 ಕೋಟಿ ಮತದಾರರು ಇದ್ದಾರೆ. ಈ ಪೈಕಿ 3.92 ಕೋಟಿ ಪುರುಷ ಮತದಾರರು, 3.50 ಕೋಟಿ ಮಹಿಳಾ ಮತದಾರರು, 1,725 ತೃತೀಯಲಿಂಗಿ ಮತದಾರರಿದ್ದಾರೆ, 14.01 ಲಕ್ಷ ಫಸ್ಟ್‌ ಟೈಮ್‌ ವೋಟರ್ಸ್‌ ಇದ್ದಾರೆ. ಒಟ್ಟು 90,712 ಬೂತ್‌ಗಳನ್ನ ನಿರ್ಮಾಣ ಮಾಡಲಾಗಿದ್ದು, ನಗರದಲ್ಲಿ 13,911 ಹಾಗೂ ಗ್ರಾಮೀಣ ಭಾಗದಲ್ಲಿ 76,801 ಬೂತ್‌ಗಳಿರಲಿವೆ. ಎಲ್ಲಾ ಬೂತ್‌ಗಳಲ್ಲೂ ವೆಬ್‌ಕ್ಯಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : ಸಮೀಕ್ಷೆದಾರರು ಸರಿಯಾದ ಮಾಹಿತಿ ಸಂಗ್ರಹಿಸಿಲ್ಲ, ಸರ್ಕಾರ ಮರು ಸಮೀಕ್ಷೆ ನಡೆಸಬೇಕು – ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ನೆಲ್ಲಿಗೆರೆ ಬಾಲು ಆಗ್ರಹ!

Btv Kannada
Author: Btv Kannada

Read More