ಕೋಲಾರ : ಮಾಲೂರು ಶಾಸಕ ಕೆ.ವೈ ನಂಜೇಗೌಡ ಆಪ್ತ ಹಾಗೂ ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಕರೀಸಂದ್ರ ಗ್ರಾಮದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಪ್ರವೀಣ್ ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ದಲಿತ ಮುಖಂಡ. ಶಾಸಕರ ಅನುದಾನದಲ್ಲಿ ನೀಡಿರುವ ಹೈಮಾಸ್ಟ್ ಬೀದಿ ದೀಪ ಅಳವಡಿಕೆ ವಿಚಾರದಲ್ಲಿ ಗಲಾಟೆ ನಡೆದಿದ್ದು, ಇತ್ತೀಚೆಗೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ ವಲಸೆ ಕಾಂಗ್ರೆಸ್ ಕಾರ್ಯಕರ್ತರಾದ ಮಾಜಿ ಗ್ರಾಮಪಂಚಾಯಿತಿ ಸದಸ್ಯ ಮಂಜುನಾಥ್ ಕುಟುಂಬದವರು ಹಲ್ಲೆ ಮಾಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಾದ ಪ್ರವೀಣ್, ಪ್ರಸನ್ನ ಕುಮಾರ್, ಲಕ್ಷ್ಮೀನಾರಾಯಣ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಪ್ರವೀಣ್, ಶಾಸಕ ಕೆ.ವೈ ನಂಜೇಗೌಡ ಅವರಿಗೆ ಆಪ್ತರಾಗಿದ್ದರೆಂಬ ದ್ವೇಷದಿಂದ ಸುಮ್ಮನೆ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ.

ಈ ಸಂಬಂಧ ಹಲ್ಲೆಗೊಳಗಾದ ಕಾಂಗ್ರೆಸ್ ಕಾರ್ಯಕರ್ತ ಪ್ರವೀಣ್ ಪ್ರತಿಕ್ರಿಯಿಸಿ, ಮೊದಲೇ ನಮ್ಮ ಕುಟುಂಬದ ಮೇಲೆ ಮಂಜುನಾಥ್ ಹಾಗೂ ಅವರ ತಮ್ಮಂದಿರು ಐದಾರು ಬಾರಿ ನನ್ನ ಮೇಲೆ ಹಲ್ಲೆ ಮಾಡಿದರು. ಗ್ರಾಮಸ್ಥರ ಮೇಲೆ ಹಲವಾರು ಬಾರಿ ಮಂಜುನಾಥ್ ಕುಟುಂಬ ದೌರ್ಜನ್ಯ ನಡೆಸಿದ್ದಾರೆ. ಜೆಡಿಎಸ್ನಲ್ಲಿ ಇದ್ದರೆ ನನ್ನ ಮೇಲೆ ದೌರ್ಜನ್ಯ ನಡೆಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷ ಸೇರಿ ನನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ, ಶಾಸಕರೇ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತ ಹಾಗೂ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ದಲಿತ ರಮೇಶ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ದಲಿತರ ಮೇಲೆ ಹಲ್ಲೆ ಪ್ರಕರಣಗಳು ಜಾಸ್ತಿಯಾಗಿವೆ. ಒಬ್ಬ ಕಾಂಗ್ರೆಸ್ ಕಾರ್ಯಕರ್ತನಾಗಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ನೋವು ತಂದಿದೆ, ಶಾಸಕ ನಂಜೇಗೌಡ ಇಬ್ಬರ ಜೊತೆ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಬಹುದಿತ್ತು. ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು ಯಾವುದೇ ಕಾಂಗ್ರೆಸ್ ನಾಯಕರು ಕಾರ್ಯಕರ್ತರ ಆರೋಗ್ಯ ವಿಚಾರಿಸಿಲ್ಲ ಎಂದು ಹೇಳಿದರು.







