ದಾವಣಗೆರೆ : ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ್ದಾರೆಂದು DySP ಪ್ರಶಾಂತ್ ಮುನ್ನಾಳಿ, CPI ನಿರಂಜನ್ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ, ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ತಪ್ಪಿಲ್ಲದಿದ್ದರೂ ಸಹ ಅಮಾನತು ಮಾಡಿದ್ದಾರೆಂದು ಸರ್ಕಾರ ವಿರುದ್ದ ತೀವ್ರ ಆಕ್ರೋಶದ ಕೂಗು ಕೇಳಿ ಬರುತ್ತಿದೆ.
ಇನ್ನು, ಅಧಿಕಾರಿಗಳ ಅಮಾನತು ಖಂಡಿಸಿ ಇಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಪ್ರೊಟೆಸ್ಟ್ ನಡೆಸಲಿದೆ. ಚನ್ನಗಿರಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮಾಡಿ ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನಾಕಾರರು ಮನವಿ ಸಲ್ಲಿಸಲ್ಲಿದ್ದಾರೆ. ಈ ಹಿನ್ನಲೆ ದಾವಣಗೆರೆ ಜಿಲ್ಲೆ ಚನ್ನಗಿರಿ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಘಟನೆಯ ಹಿನ್ನೆಲೆ : ಶುಕ್ರವಾರ (ಮೇ 24) ಸಂಜೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು, ಆದಿಲ್ ಎಂಬಾತನನ್ನ ವಶಕ್ಕೆ ಪಡೆದಿದ್ದರು. ಚನ್ನಗಿರಿಯ ಟಿಪ್ಪು ನಗರ ನಿವಾಸಿಯಾಗಿದ್ದ ಆದಿಲ್, ಮಟ್ಕಾ ಆಡಿಸುತ್ತಿದ್ದ ಆರೋಪ ಎದುರಿಸುತ್ತಿದ್ದ. ಹೀಗಾಗಿ ಸಂಜೆ ಠಾಣೆಗೆ ಕರೆತಂದ ಪೊಲೀಸರು ತನಿಖೆಗೆ ಒಳಪಡಿಸಿದ್ದರು. ಆದರೆ ಠಾಣೆಗೆ ಬರ್ತಿದ್ದಂತೆ ಬಿಪಿ ಲೋ ಆಗಿದೆಯಂತೆ. ಕೂಡಲೇ ಆತನನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸಿದೆ ಆದಿಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಆದಿಲ್ ಸಾವಿನ ವಿಷಯ ಗೊತ್ತಾಗುತ್ತಿದ್ದಂತೆ ಆತನ ಕುಟುಂಬಸ್ಥರು ಪೊಲೀಸರೇ ಚಿತ್ರಹಿಂಸೆ ನೀಡಿ, ಹೊಡೆದು ಸಾಯಿಸಿದ್ದಾರೆ ಎಂದು ಠಾಣೆಯ ಮುಂದೆ ಬಂದು ಆಕ್ರೋಶ ಹೊರಹಕಿದ್ದಾರೆ. ಶುಕ್ರವಾರ ರಾತ್ರಿ ಈ ವಿಷಯ ಎಲ್ಲೆಡೆ ಹಬ್ಬುತಿದ್ದಂತೆ ರೊಚ್ಚಿಗೆದ್ದ ಆದಿಲ್ ಕಡೆಯವರು ಠಾಣೆಗೆ ನೂರಾರು ಸಂಖ್ಯೆಯಲ್ಲಿ ನುಗ್ಗಿ ಬಂದಿದ್ದಾರೆ. ಕೈಗೆ ಸಿಕ್ಕ ಸಿಕ್ಕವನ್ನೆಲ್ಲ ಎಸೆದು ಇಡೀ ಠಾಣೆಯನ್ನ, 10ಕ್ಕೂ ಹೆಚ್ಚು ಪೊಲೀಸ್ ವಾಹವನ್ನು ಧ್ವಂಸಗೊಳಿಸಿದ್ದಾರೆ. ಘಟನೆಯಲ್ಲಿ 11 ಪೊಲೀಸ್ ಸಿಬ್ಬಂದಿಗೆ ಗಾಯವಾಗಿತ್ತು.
ಘಟನೆ ವೇಳೆ ಗಲಾಟೆ ಮಾಡದಂತೆ ಅಧಿಕಾರಿಗಳೇ ಕೈಮುಗಿದು ಬೇಡಿಕೊಂಡಿದ್ದರು. ಆದ್ರೆ ಅದನ್ನು ಕೇಳದ ಕೆಲ ಕಿಡಿಗೇಡಿಗಳು ಗಲಾಟೆ ಮುಂದವರೆಸಿದ್ದರು. ಬಳಿಕ ಕರ್ತವ್ಯ ಲೋಪ ಎಂದು DySP ಪ್ರಶಾಂತ್ ಮುನ್ನಾಳಿ, CPI ನಿರಂಜನ್ ಅವರನ್ನೇ ಸಸ್ಪೆಂಡ್ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಸಸ್ಪೆಂಡ್ ಮಾಡಿದ್ದಕ್ಕೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಕಿಡಿಕಾರುತ್ತಿವೆ.