ನಟಿ ಮತ್ತು ನಿರ್ಮಾಪಕಿ ರಕ್ಷಿತಾ ಪ್ರೇಮ್ ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಾದ ‘ಕಾಮಿಡಿ ಕಿಲಾಡಿಗಳು’ ಮತ್ತು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಗೆ 9 ವರ್ಷದಿಂದ ತೀರ್ಪುಗಾರರಾಗಿದ್ದರು. ಕಳೆದ ವರ್ಷ ಜೀ ಕನ್ನಡ ವಾಹಿನಿಗೆ ರಕ್ಷಿತಾ ಇದ್ದಕ್ಕಿದ್ದಂತೆ ಗುಡ್ ಬೈ ಹೇಳಿದ್ದರು. ದೀರ್ಘಕಾಲದಿಂದ ಮುನ್ನಡೆಸಿಕೊಂಡು ಬಂದಿದ್ದ ಈ ಜಡ್ಜ್ ಸ್ಥಾನದಿಂದ ಅವರು ಕೆಳಗಿಳಿಯಲು ಕಾರಣವೇನು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಆ ಪ್ರಶ್ನೆಗೆ ಇದೀಗ ರಕ್ಷಿತಾ ಉತ್ತರ ನೀಡಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟೀವ್ ಆಗಿರುತ್ತಾರೆ. ಇತ್ತೀಚೆಗಷ್ಟೇ ಅವರು ತಮ್ಮ ಅಭಿಮಾನಿಗಳೊಂದಿಗೆ ‘ಪ್ರಶ್ನೋತ್ತರ’ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು, “ನೀವು ಜೀ ಕನ್ನಡ ವಾಹಿನಿಯ ತೀರ್ಪುಗಾರರ ಸ್ಥಾನವನ್ನು ತೊರೆಯಲು ಕಾರಣವೇನು?” ಎಂದು ನೇರವಾಗಿ ಪ್ರಶ್ನಿಸಿದರು. ಇದಕ್ಕೆ ರಕ್ಷಿತಾ ಅವರು ಅಷ್ಟೇ ಪ್ರಾಮಾಣಿಕವಾಗಿ ಉತ್ತರಿಸಿದ್ದಾರೆ.

ಅಭಿಮಾನಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಕ್ಷಿತಾ ಪ್ರೇಮ್ ಅವರು, “ನನ್ನ ಪ್ರಾಮಾಣಿಕ ಉತ್ತರ ಯಾವಾಗಲೂ ಸತ್ಯವೇ ಆಗಿರುತ್ತದೆ. ಜೀ ಕನ್ನಡ ವಾಹಿನಿಯ ಆಂತರಿಕ ತಂಡದಲ್ಲಿ ಬದಲಾವಣೆಗಳಾದವು. ಆ ಹೊಸ ತಂಡದ ಜೊತೆ ಕೆಲಸ ಮಾಡಲು ನನಗೆ ಸಮಸ್ಯೆ ಎದುರಾಯಿತು, ಈ ಕಾರಣಕ್ಕಾಗಿ ನಾನು ಅಲ್ಲಿಂದ ಹೊರಬಂದೆ. ಇಂದಿಗೂ ಅಲ್ಲಿರುವ ಹಲವರು ನನಗೆ ಬಹಳ ಇಷ್ಟ. ಅಲ್ಲಿ ಕಳೆದ ಸುಂದರ ಕ್ಷಣಗಳು ಮತ್ತು ನೆನಪುಗಳು ಸದಾ ನನ್ನ ಹೃದಯದಲ್ಲಿರುತ್ತವೆ. ಆದರೆ, ಕೆಲವು ವ್ಯಕ್ತಿಗಳು ಎಲ್ಲವನ್ನೂ ಕೆಡಿಸುತ್ತಾರೆ, ಅದಕ್ಕೆ ನಾವು ಏನು ಮಾಡಲು ಸಾಧ್ಯ? ಸದ್ಯ ನಾನು ಆ ವಿಚಾರದಿಂದ ಹೊರಬಂದು ಮುಂದೆ ಸಾಗಿದ್ದೇನೆ. ಅವರೂ ಕೂಡ ಹಾಗೆಯೇ ಇರುತ್ತಾರೆ ಎಂದು ಭಾವಿಸುತ್ತೇನೆ” ಎಂದು ತಿಳಿಸಿದ್ದಾರೆ.
ಆರೇಳು ತಿಂಗಳ ಹಿಂದೆಯೂ ಈ ಬಗ್ಗೆ ರಕ್ಷಿತಾ ಮಾತನಾಡಿದ್ದರು. “ನಿರ್ದಿಷ್ಟ ಕಾರ್ಯಕ್ರಮದಲ್ಲಿ ನೀವು ನನ್ನನ್ನು ನಿರೀಕ್ಷಿಸುತ್ತಿದ್ದೀರಿ ಎಂಬುದು ನನಗೆ ತಿಳಿದಿದೆ. ಆದರೆ, ಕಳೆದ 9 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡಿದ್ದ ವಾಹಿನಿಯಲ್ಲಿ ನಾನೀಗ ಇಲ್ಲ. ಜೀವನದಲ್ಲಿ ಸದಾ ಬದಲಾವಣೆಗಳನ್ನು ಬಯಸುತ್ತೇನೆ. ಮುಖ್ಯವಾಗಿ ‘ಕಮ್ಫರ್ಟ್ ಝೋನ್’ನಿಂದ ಹೊರಬಂದು ಹೊಸತನ್ನು ಪ್ರಯತ್ನಿಸುವುದು ನನಗೀಗ ಅಗತ್ಯವಾಗಿದೆ” ಎಂದು ರಕ್ಷಿತಾ ಹೇಳಿಕೊಂಡಿದ್ದರು. ಇದೀಗ ಅಭಿಮಾನಿ ಕೇಳಿದ ಪ್ರಶ್ನೆ ಉತ್ತರಿಸುತ್ತಾ, ಕಾರಣವನ್ನೂ ತಿಳಿಸಿದ್ದಾರೆ.
ಇದನ್ನೂ ಓದಿ : ಕೆಡಿ ಸಿನಿಮಾಗೆ ಸೆನ್ಸಾರ್ ಕಂಟಕ – ರಿವೈಸಿಂಗ್ ಕಮಿಟಿ ಅಂಗಳದಲ್ಲಿ ಧ್ರುವ ಸರ್ಜಾ ಸಿನಿಮಾ!









