ಬೆಂಗಳೂರು : ಮಲ್ಲೇಶ್ವರಂ ಪೊಲೀಸ್ ವಸತಿಗೃಹದ ಜಾಗವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಇನ್ಸ್ಪೆಕ್ಟರ್ ಎಂ.ಕುಮಾರ್ ನೀಡಿದ ದೂರಿನ ಮೇರೆಗೆ ಮೂವರ ವಿರುದ್ಧ FIR ದಾಖಲಾಗಿದ್ದು, ಪೊಲೀಸರು ಶಿವಮೊಗ್ಗ ಮೂಲದ ಬಿಜೆಪಿ ಮುಖಂಡ ಶ್ರೀನಾಥ್ ನಗರಗದ್ದೆ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ತುಮಕೂರು ಮೂಲದ ಕೃಷ್ಣಮೂರ್ತಿ, ಶಿವಮೊಗ್ಗದ ಶ್ರೀನಾಥ್ ನಗರಗದ್ದೆ ಮತ್ತು ಕಿಶನ್ರನ್ನು ಬೆಂಗಳೂರು ಮಲ್ಲೇಶ್ವರದ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನು ಈಗಾಗಲೇ 1913ರ ಮಾಪನ ನಕ್ಷೆಯಲ್ಲಿಯೇ ಪೊಲೀಸ್ ವಸತಿಗೃಹವೆಂದು ಗುರುತಿಸಿದ್ದು, ಇದು ಸುಮಾರು 80 ಕೋಟಿ ಮೌಲ್ಯದ ಆಸ್ತಿಯಾಗಿದೆ. ಪ್ರಸ್ತುತ ಇಲ್ಲಿ ಈ ಸ್ಥಳದಲ್ಲೀಗ ನಾಲ್ವರು ಇನ್ಸ್ಪೆಕ್ಟರ್ಗಳ ಕುಟುಂಬ ಹಾಗೂ ಸಿಬ್ಬಂದಿ ವಾಸಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಅಲ್ಲೇ ವಾಸವಿರುವ ಇನ್ಸ್ಪೆಕ್ಟರ್ ಕುಮಾರ್ ಮನೆಗೆ ವಿದ್ಯುತ್ ಬಿಲ್ ಬಂದಿದ್ದು, ಅದರಲ್ಲಿ ಮಹಾಲಕ್ಷ್ಮೀ ಎಂಬ ಖಾಸಗಿ ಹೆಸರಿತ್ತು.
ಅನುಮಾನಗೊಂಡ ಕುಮಾರ್ ಬೆಸ್ಕಾಂ, ಜಿಬಿಎ, ಉಪ ನೋಂದಣಿ ಕಚೇರಿಗಳಿಗೆ ಭೇಟಿ ನೀಡಿ ವಿಚಾರಣೆ ಆರಂಭಿಸಿದಾಗ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಮಹಾಲಕ್ಷ್ಮೀ ಎಂಬ ಹೆಸರಿಗೆ ವರ್ಗಾವಣೆ ಮಾಡಲಾಗಿರುವುದು ಕಂಡು ಬಂದಿದೆ. ಜೊತೆಗೆ, ಜಿಬಿಎ ಮೂಲಕ ಅಕ್ರಮವಾಗಿ ಇ-ಖಾತಾ ಮಾಡಿಸಿರುವುದು ಹಾಗೂ ಮಾರಾಟ ಮಾಡಲು ಒಪ್ಪಂದ ಪತ್ರ ಕೂಡ ಮಾಡಲಾಗಿತ್ತು. ಆಸ್ತಿ ವರ್ಗಾವಣೆಗೊಂಡಿರುವ ಮಹಾಲಕ್ಷ್ಮಿ ವಯೋವೃದ್ಧರಾಗಿದ್ದಾರೆ. ಆ ಆಸ್ತಿ ಕಬಳಿಕೆ ವಿಚಾರ ಈ ಮಹಾಲಕ್ಷ್ಮಿ ಯವರ ಗಮನದಲ್ಲೇ ಇರಲಿಲ್ಲ. ಆದರೆ, ಆರೋಪಿಗಳು ಅಕ್ರಮ ದಾಖಲೆ ಸೃಷ್ಟಿಸಿ ಅವರ ಹೆಸರಿಗೆ ಆಸ್ತಿ ವರ್ಗಾ ವಣೆ ಮಾಡಿದ್ದು ತನಿಖೆಯಲ್ಲಿ ತಿಳಿದು ಬಂದಿದೆ.
ಸ್ಥಳ ಪರಿಶೀಲನೆ ಮಾಡದೇ ನಕಲಿ ದಾಖಲೆ ಗಳನ್ನೇ ನೋಡಿ ಇ-ಖಾತಾ ಮಾಡಿಕೊಟ್ಟ, ವಿದ್ಯುತ್ ಬಿಲ್ ವರ್ಗಾವಣೆ ಮಾಡಿಕೊಟ್ಟ ಜಿಬಿಎ ಮತ್ತು ಬೆಸ್ಕಾಂ ಅಕಾರಿಗಳಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ. ಶ್ರೀನಾಥ್ ನಗರಗದ್ದೆ ಗ್ಯಾಂಗಿನ ಹಿಂದೆ ಬಹುದೊಡ್ಡ ಜಾಲವೇ ಇರುವ ಬಗ್ಗೆ ಈ ಜಾಲದ ಒಳಗೆ ಸರ್ಕಾರಿ ಇಲಾಖೆಗಳ ಅಕಾರಿಗಳ ಕೈವಾಡದ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಆರೋಪಿಗಳು ಎಲ್ಲೆಲ್ಲಿ ಭೂ ಕಬಳಿಕೆ ಮಾಡಿದ್ದಾರೆಂಬ ಬಗ್ಗೆಯೂ ತನಿಖೆ ನಡೆದಿದೆ.
ಶ್ರೀನಾಥ್ ನಗರಗದ್ದೆಯೇ ಈ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದ್ದು, ಈತ ಕೆ.ಎಸ್.ಈಶ್ವರಪ್ಪನವರು ಉಪಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ.
ಇದನ್ನೂ ಓದಿ : ಕಾಂಗ್ರೆಸ್ ಕುಟುಂಬ ರಾಜಕಾರಣ ಪೋಷಿಸಿಕೊಳ್ತಿದೆ – ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ!








